ನಮ್ಮದು ಭರತ ಭೂಮಿ. ವಿಶ್ವದಲ್ಲೇ ಅತ್ಯಂತ ಶ್ರೇಷ್ಠ ರಾಷ್ಟ್ರ! ಪ್ರಪಂಚದಲ್ಲಿ ಮಿಕ್ಕ ದೇಶಗಳು ಭೌತಿಕವಾಗಿ ಸಮೃದ್ಧವಾಗಿರಬಹುದು, ಆದರೆ ಭೌತಿಕವಾಗಿ ಮಾತ್ರವಲ್ಲದೆ ಆಧ್ಯಾತ್ಮಿಕವಾಗಿಯೂ ಅತ್ಯಂತ ಸಮುದ್ಧವಾದ ದೇಶ 'ಭಾರತ'. ಆದಿ ಕಾಲದಿಂದಲೂ ಅನೇಕ ಋಷಿ-ಮುನಿಗಳು ತಮ್ಮ ಅಮೋಘ ತಪಸ್ಸಿನಿಂದ ಸಿದ್ಧಿಯನ್ನು ಪಡೆದು ಆಧ್ಯಾತ್ಮಿಕತೆಯ ಮಹತ್ವವನ್ನು ಇಡೀ ವಿಶ್ವಕ್ಕೆ ಸಾರಿದ ಪುಣ್ಯ ಭೂಮಿಯಿದು.ಅಂತಹ ಸಾಧುಗಳಲ್ಲೊಬ್ಬರು 'ಶ್ರೀ ದೇವರ ದಾಸಿಮಯ್ಯ ನವರು.'. ಈ ಪುಣ್ಯ ಪುರುಷನ ಬಗ್ಗೆ ಹಲವರಿಗೆ ಪರಿಚಯವಿಲ್ಲ. ಇವರು ಕೇವಲ ಒಬ್ಬ ಮುನಿ ಮಾತ್ರವಲ್ಲದೆ, ಶತ ಶತಮಾನಗಳಿಂದ ಬಂದಂತಹ ದಕ್ಷಿಣ ಭಾರತದಲ್ಲಿ ಹೆಸರಾದ ಶರಣರಿಗಿಂತಲೂ ಮೊಟ್ಟ ಮೊದಲ ವಚನಕಾರರಾಗಿದ್ದರು. ದೇವರ ದಾಸಿಮಯ್ಯ ನವರು ವಚನಗಳನ್ನು ರಚಿಸಿರುವವರಲ್ಲಿ ಮೊದಲಿಗರಾದರೂ ಸಹ ಅವರ ವಚನಗಳು ಯಾರಿಗೂ ತಿಳಿದಿಲ್ಲ. ನಂತರ ಬಂದ ಎಲ್ಲಾ ಶರಣರೂ, ಸಾಧು ಸಂತರೂ ರಚಿಸಿದ ವಚನಗಳು ಮಾತ್ರ ಬಳಕೆಗೆ ಮತ್ತು ಬೆಳಕಿಗೂ ಬಂದವು. ಹಾಗಾಗಿ ಆ ಮಹರ್ಷಿಯ ಒಂದು ಕಿರು ಪರಿಚಯ.
ದೇವರ ದಾಸಿಮಯ್ಯ ಸರಿ ಸುಮಾರು 10/11 ನೇ ಶತಮಾನದವರು. ಸುರಪುರ ಜಿಲ್ಲೆಯ ಮುದನೂರು ಎಂಬ ಹಳ್ಳಿಯಲ್ಲಿ ಜನನ. ಇವರ ಪತ್ನಿ ದುಗ್ಗಳೆ. ಇಬ್ಬರದೂ ಅನ್ಯೋನ್ಯವಾದ ದಾಂಪತ್ಯ ಜೀವನ. ಸೀರೆ ನೇಯುತ್ತಾ ತಮ್ಮ ಪ್ರಾಪಂಚಿಕ ಜೀವನದಲ್ಲಿ ಸಂಸಾರ ಸಾಗಿಸುತ್ತಾ, ಭಕ್ತಿ ಮಾರ್ಗವೇ ಉನ್ನತ ಎಂದು ಸಾರಿದವರು. ಇವರು ರಾಮನಾಥ ಎಂಬ ದೇವರಲ್ಲಿ ಅಪಾರವಾದ ಭಕ್ತಿಯನ್ನು ಇಟ್ಟು ಕೊಂಡಿದ್ದು "ರಾಮನಾಥ" ಎನ್ನುವ ನಾಮಂಕಿತವನ್ನು ಕೊಟ್ಟು ಅನೇಕ ವಚನಗಳನ್ನು ರಚಿಸಿದ್ದಾರೆ. ದೇವರ ದಾಸಿಮಯ್ಯನವರು ವಿಶ್ವದ ಪ್ರಥಮ ವಚನಕಾರರಾಗಿ ರಾಮನಾಥ ಎಂಬ ಹೆಸರಲ್ಲಿಯೇ 176 ವಚನಗಳನ್ನು ರಚಿಸಿದ್ದಾರೆ. ಅದರಲ್ಲಿ ಕೆಲವು ವಚನಗಳನ್ನು ಆಯ್ಕೆ ಮಾಡಿ ಅದರ ಭಾವಾರ್ಥವನ್ನು ಕೂಡ ಅಳವಡಿಸಲಾಗಿದೆ. ಇವರ ವಚನಗಳು ತುಂಬಾ ಉಪಯುಕ್ತ ಹಾಗು ತಮ್ಮ ದಿನನಿತ್ಯದ ಜೀವನಕ್ಕೆ ಸಂಭಂದಿಸಿದ ವಿಷಯಗಳ ಬಗ್ಗೆ ರಚಿಸಿದ ವಚನಗಳು ತುಂಬಾ ಸರಳವಾಗಿ ಮನಸೂರೆಗೊಳ್ಳುತ್ತವೆ. ದಾಸಿಮಯ್ಯನವರ ವಚನಗಳು ಅರ್ಥೈಸಿ ಕೊಳ್ಳಲು ಬಹಳ ಸರಳವಾಗಿದ್ದು, ಸಮಾಜಕ್ಕೆ ವಿಶೇಷವಾದ ಧಾರ್ಮಿಕ ಪ್ರಜ್ಞೆಯ ಸ್ಪೂರ್ತಿಯ ಚಿಲುಮೆಯಾಗಿವೆ. ಆದರೆ ವಿಷಾದದ ಸಂಗತಿಯೆಂದರೆ ಇವರ ಬಗ್ಗೆ ಹೆಚ್ಚಿಗೆ ಪ್ರಚಾರಗಳಾಗಲಿಲ್ಲ. ಅವರ ಉಪಲಬ್ಧ ವಚನಗಳಲ್ಲಿ ಉತ್ಕಟವಾದ ವೀರಶೈವ ನಿಷ್ಠೆ, ನಿಷ್ಠುರವಾದ ಸ್ಪಷ್ಟ ವಾಕ್ಯತೆ, ಮಾರ್ಮಿಕವಾದ ಸಂಕ್ಷಿಪ್ತ ಶೈಲಿ, ಔಚಿತ್ಯಪೂರ್ಣವಾದ ದೃಷ್ಟಾಂತಗಳ ಸಂಪತ್ತಿಯ ಗುಣಗಳು ಎದ್ದು ಕಾಣುತ್ತವೆ. ದೇವರ ದಾಸಿಮಯ್ಯನವರು ತಮ್ಮ ಆದ್ಯಾತ್ಮ ಸಿರಿವಂತಿಕೆಯಿಂದ ಮೆರೆದು, ಶಿವನ ಹೆಜ್ಜೆಯಲ್ಲಿ ಹೆಜ್ಜೆಯನಿಟ್ಟು, ತಮ್ಮ ಹೆಜ್ಜೆ ಪಾಡುಗಳನ್ನು ನಮಗಾಗಿ ಉಳಿಸಿಹೋಗಿದ್ದಾರೆ. ಇವುಗಳನ್ನು ಅನುಸರಿಸಿ ನಡೆದರೆ ಸಾಕು ನಮ್ಮ ಬಾಳು ಬೆಳಕಾಗುವುದು ಇಂತಹ ಮಹಾಪುರುಷನನ್ನು ಪಡೆದ ಸಮಾಜವೇ ದನ್ಯ. ಎಲ್ಲರ ಮನ ಮತ್ತು ಮನೆ ಮನೆಗೂ ತಲುಪಿಸುವ ಜವಾಬ್ದಾರಿ ನಿಮ್ಮದಾಗಿದೆ... ನಿಮ್ಮೆಲ್ಲರ ಸಹಕಾರ ಮತ್ತು ಪ್ರೋತ್ಸಾಹಕ್ಕೆ ಧನ್ಯವಾದಗಳು...
0 Comments
|