ವಚನಕಾರ: ಜೇಡರ ದಾಸಿಮಯ್ಯ
ಅಂಕಿತ ನಾಮ: ರಾಮನಾಥ
ಕಾಲ:
ದೊರಕಿರುವ ವಚನಗಳು: 176 (ಆಧಾರ: ಸಮಗ್ರ ವಚನ ಸಂಪುಟ)
ತಂದೆ/ತಾಯಿ:
ಹುಟ್ಟಿದ ಸ್ಥಳ:
ಪರಿಚಯ: ಅ ಪದದಿಂದ ಪ್ರಾರಂಭವಾಗುವ ವಚನಗಳು:
ಅನುಭಾವವಿಲ್ಲದ ಭಕ್ತಿ ತಲೆಕೆಳಗಾದುದಯ್ಯಾ. ಅನುಭಾವ ಭಕ್ತಿಗಾಧಾರ; ಅನುಭಾವ ಭಕ್ತಿಗೆ ನೆಲೆವನೆ. ಅನುಭಾವ ಉಳ್ಳವರ ಕಂಡು ತುರ್ಯ ಸಂಭಾಷಣೆಯ ಬೆಸಗೊಳ್ಳದಿದ್ದಡೆ ನರಕದಲ್ಲಿಕ್ಕಯ್ಯಾ! ರಾಮನಾಥ.
--------------
ಅಂತರಂಗ ಬಹಿರಂಗದಲ್ಲಿ ಸರ್ವಾಚಾರ ಸಂಪತ್ತಿನ ಆಚರಣೆಯನರಿಯದ ಮೂಢಾತ್ಮಂಗೆ ಲಿಂಗಾಂಗ ಸಮರಸವ ಹೇಳಿ ಸರ್ವಾಂಗ ಸ್ನಾನಧೂಳನ ನಾಲ್ವತ್ತೆಂಟು ಸ್ಥಾನಂಗಳಲ್ಲಿ ಧಾರಣ ಕ್ರಿಯಾಭಸಿತವ ಧರಿಸುವ ನಿರ್ಣಯವ ಹೇಳಿ ಅಂತರಂಗದ ಜಪವ ಹೇಳುವನೊಬ್ಬ ಆಚಾರದ್ರೋಹಿ ನೋಡಾ, ರಾಮನಾಥ.
--------------
ಜೇಡರ ದಾಸಿಮಯ್ಯ
ಅಂಬಲಿ ಅಲೆಯಾಗಿ, ತುಂಬೆಯ ಮೇಲೋಗರವಾಗಿ, ಉಂಬ ಸದುಭಕ್ತನ ಮನೆಯಾಗಿ, ಲೋಕದ ಡಂಭಕರ ಮನೆ ಬೇಡ, ರಾಮನಾಥ
--------------
ಜೇಡರ ದಾಸಿಮಯ್ಯ
ಅಡಗ ತಿಂಬರು; ಕಣಿಕದ ಅಡಿಗೆಯಿರಲಿಕೆ. ಕುಡಿವರು ಸುರೆಯ! ಹಾಲಿರಲಿಕೆ. ಹಡದುಂಬ ವೇಶಿಯನೊಲ್ಲದೆ ಹೆರರ ಮಡದಿಗಳುಪುವ ಸತ್ತ ನಾಯ ತಿಂಬ ಹಡ್ಡಿಗರನೇನೆಂಬೆನೈ! ರಾಮನಾಥ.
--------------
ಜೇಡರ ದಾಸಿಮಯ್ಯ
ಅಚ್ಚ ಶಿವೈಕ್ಯಂಗೆ ಹೊತ್ತಾರೆ ಅಮವಾಸೆ; ಮಟ್ಟ ಮಧ್ಯಾಹ್ನ ಸಂಕ್ರಾಂತಿ; ಮತ್ತೆ ಅಸ್ತಮಾನ ಪೌರ್ನಮಿ ಹುಣ್ಣಿಮೆ; ಭಕ್ತನ ಮನೆಯ ಅಂಗಳವೆ ವಾರಣಾಸಿ ಕಾಣಾ! ರಾಮನಾಥ.
--------------
ಜೇಡರ ದಾಸಿಮಯ್ಯ
ಅರ್ಥವುಂಟೆಂದು ಅಹಂಕರಿಸಿ ಮಾಡುವನ ಭಕ್ತಿ ತೊತ್ತಿನ ಕೂಟ, ತೊರೆಯನ ಮೇಳದಂತೆ. ತನು-ಮನ-ಧನದಲ್ಲಿ ವಂಚನೆಯುಳ್ಳ ಪ್ರಪಂಚಿಯ ಮನೆಯ ಕೂಳು ಶುನಕನ ಬಾಯ ಎಲುವ ಪ್ರತಿಶುನಕ ತಿಂದಂತೆ ಕಾಣಾ ! ರಾಮನಾಥ.
--------------
ಜೇಡರ ದಾಸಿಮಯ್ಯ
ಅಂಗಲಿಂಗದ ಒಳಗೆ ಲಿಂಗಕಂಗಳು ಬೆಳಗು, ಹಿಂಗಲಾಪುದೆ ಹೇಳು ಅಜ್ಞಾನವ! ಸಂಗಸುಖಮಥನದ ಅಸಂಗದಿಂದದನರಿದು ಹಿಂಗಲಿಕೆ ಹೆಸರೇನು? ರಾಮನಾಥ.
--------------
ಜೇಡರ ದಾಸಿಮಯ್ಯ
ಅಡವಿಯಂಗಡಿಯಕ್ಕು, ನಡುಗಡಲು ನೆಲೆಯಕ್ಕು. ತೊಡಕುವ ಮಾರಿಯಪಮೃತ್ಯ ಶಿವಭಕ್ತರ ಒಡಲು ನಿನ್ನೊಡಲೆಂದು ಮುಟ್ಟಲಮ್ಮವು ಕಾಣಾ! ರಾಮನಾಥ.
--------------
ಜೇಡರ ದಾಸಿಮಯ್ಯ
ಅನುಭಾವವಿಲ್ಲದೆ ಈ ತನು ಎಳತಟವಾದುದಯ್ಯಾ. ಅನುಭಾವವೀ ತನುವಿಂಗೆ ಆಧಾರ. ಅನುಭಾವರ ಅನುಭಾವವನು ಮನವಾರೆ ವೇದಿಸಿದವರಿಗೆ ಜನನವಿಲ್ಲ ಕಾಣಾ!ರಾಮನಾಥ.
--------------
ಜೇಡರ ದಾಸಿಮಯ್ಯ
ಅಗ್ನಿ ಸುಡಲಲ್ಲದೆ ಸುಳಿಯಲರಿಯದು ವಾಯು ಸುಳಿವುದಲ್ಲದೆ ಸುಡಲರಿಯದು ಆ ಆಗ್ನಿ ವಾಯುವ ಕೂಡಿದಲ್ಲದೆ ಅಡಿಯಿಡಲರಿಯದು ಈ ಪರಿಯಂತೆ ನರರರಿವರೆ ಕ್ರಿಯಾಜ್ಞಾನಭೇದವ? ರಾಮನಾಥ
--------------
ಜೇಡರ ದಾಸಿಮಯ್ಯ
ಅಡವಿ ಅರಣ್ಯದಲಿ ಮಡಿವನಕ ತಪವಿದ್ದು ಮಡಿವಾಗ ಮೃಡನ ಮರದಡೆ, ತುಂಬಿದ ಸಕ್ಕರೆಯ ಮಡುವಿನೊಳಗೊಕ್ಕಂತೆ! ರಾಮನಾಥ.
--------------
ಜೇಡರ ದಾಸಿಮಯ್ಯ
ಅಡಗಿನೊಳಗಣ ಹಾಲು ಅಡಗಿಪ್ಪ ಭೇದವನು ಬೆಡಗಪ್ಪ ತುಪ್ಪದ ಕಂಪಿನ ಪರಿಯಂತೆ. ಎಲೆ ಮೃಡನೆ! ನೀನು ಪ್ರಾಣ ಪ್ರಕೃತಿಗಳೊಳಗೆ ಅಡಗಿಹ ಭೇದವ ಲೋಕದ ಜಡರೆತ್ತ ಬಲ್ಲರೈ! ರಾಮನಾಥ.
--------------
ಜೇಡರ ದಾಸಿಮಯ್ಯ
ಅನ್ಯಜಾತಿಯ ಮನೆಯ ಅನ್ನಪಾನಾದಿಗಳು ತನ್ನ ಉದರದಲ್ಲಿ ಇಕ್ಕುವವ ಶಿವದ್ರೋಹಿ, ಶಿವವಂಚಕನು. ಅವ ನಿಮ್ಮ ಓ ಎನಿಸಿದಡೆ ಎನಿಸಲಿ ಅವನ ಎನ್ನತ್ತ ತಾರದಿರಾ, ರಾಮನಾಥ.
--------------
ಜೇಡರ ದಾಸಿಮಯ್ಯ
ಅಣುರೇಣು ಮಧ್ಯದ ಪ್ರಣವದಾಧಾರ ಭುವನಾಧೀಶನೊಬ್ಬನೆಯಯ್ಯ. ಇದೆ ಪರಿಪೂರ್ಣವೆಂದೆನ್ನದನ್ಯ ದೈವವ ಸ್ಮರಿಸುವ ಭವಿಯನೆಂತು ಭಕ್ತನೆಂಬೆನೈ? ರಾಮನಾಥ.
--------------
ಜೇಡರ ದಾಸಿಮಯ್ಯ
ಅರುಹ ಅರಿಯಲೆಂದು ಕುರುಹ ಕೈಯಲ್ಲಿ ಕೊಟ್ಟ! ಅರುಹನೆ ಮರದು ಕುರುಹನೆ ಹರಿದ! ಈ ಕುರುಂಬರಿಗಿನ್ನೆತ್ತಣ ಮುಕ್ತಿಯೊ? ರಾಮನಾಥ.
--------------
ಜೇಡರ ದಾಸಿಮಯ್ಯ
ಆ ಪದದಿಂದ ಪ್ರಾರಂಭವಾಗುವ ವಚನಗಳು:
ಆಸೆ ಪರಿಣಾಮಕ್ಕೆ ಬೇಸತ್ತು ಹೋಯಿತ್ತು. ಆಶ್ರಯದ ನಿದ್ರೆ ಕೆಟ್ಟಿತ್ತು. ಗ್ರಾಸ ಮೆಲ್ಲನಾಯಿತ್ತು. ಸ್ತ್ರೀಯರ ಮೇಲಣ ಇಚ್ಛೆ ಕೆಟ್ಟಿತ್ತು. ಈಶ್ವರ! ನಿಮ್ಮ ಪಾದಾಂಬುಜ ಸೇವೆಯಿಂದ ಕಾಣಾ!ರಾಮನಾಥ.
--------------
ಜೇಡರ ದಾಸಿಮಯ್ಯ
ಆದಿ ಆರರ ಭೇದ ತನುಗುಣ ಮೂವತ್ತಾರ ಮೀರಿ ತೋರಿದುದ ತೋರಿ ಮತ್ತೆ ಆರೂಢವಾದರೆ ಮೇಲೆ ನಿನ್ನಿಚ್ಛೆ ಕಾಣಾ! ರಾಮನಾಥ.
--------------
ಜೇಡರ ದಾಸಿಮಯ್ಯ
ಆಚಾರಸಹಿತವಿದ್ದಡೆ ಗುರುವೆಂಬೆ. ಆಚಾರಸಹಿತವಿದ್ದಡೆ ಲಿಂಗವೆಂಬೆ. ಆಚಾರಸಹಿತವಿದ್ದಡೆ ಜಂಗಮವೆಂಬೆ. ಸದಾಚಾರಸಹಿತವಿರದೆ ಅನ್ಯದೈವ ಭವಿಮಾಟಕೂಟವ ಮಾಡುವನ ಮನೆಯಲ್ಲಿ ಲಿಂಗಾರ್ಚನೆಯ ಮಾಡಿದನಾದಡೆ ನಿಮಗಂದೆ ದೂರವಯ್ಯಾ, ರಾಮನಾಥ.
--------------
ಜೇಡರ ದಾಸಿಮಯ್ಯ
ಆದಿ ಪ್ರಕೃತಿಯ ಮಕ್ಕಳು ಅಂದಿನವರು ಆದಿ ಪ್ರಕೃತಿಯ ಮಕ್ಕಳು ಇಂದಿನವರು ಆದಿಪ್ರಕೃತಿಯ ಜೀವ ಪ್ರಕೃತಿಯ ಭೇದವ ಬಲ್ಲವರ ಪಾದವೆ ಗತಿಯೆನಗೆ ರಾಮನಾಥ.
--------------
ಜೇಡರ ದಾಸಿಮಯ್ಯ
ಆಡಬಾರದ ಬಯಲು ಸೂಡಬಾರದ ಬಯಲು ನುಡಿಯಬಾರದ ಬಯಲು ಹಿಡಿಯಬಾರದ ಬಯಲು ಈ ಒಡಲಿಲ್ಲದ ಬಯಲೊಳಗೆ ಅಡಗಿರ್ದ ಭೇದವ ಈ ಲೋಕದ ಜಡರೆತ್ತ ಬಲ್ಲರೈ? ರಾಮನಾಥ.
--------------
ಜೇಡರ ದಾಸಿಮಯ್ಯ
ಇ ಪದದಿಂದ ಪ್ರಾರಂಭವಾಗುವ ವಚನಗಳು:
ಇಂತೆಂದ ಭೂಮಿಯ; ಇಂತೆಂದ ಗಗನವ. ಇಂತೆಂದ ಸಪ್ತಸಾಗರವ. ಇಂತೀ ಲೋಕದೊಳಗೆ ತಿಂಥಿಣಿಯಾಗಿಪ್ಪ ಅಚಿಂತನನವರಾರು ಬಲ್ಲರೈ ರಾಮನಾಥ.
--------------
ಜೇಡರ ದಾಸಿಮಯ್ಯ
ಇಳೆ ನಿಮ್ಮ ದಾನ, ಬೆಳೆ ನಿಮ್ಮ ದಾನ. ಸುಳಿದು ಬೀಸುವ ವಾಯು ನಿಮ್ಮ ದಾನ. ನಿಮ್ಮ ದಾನವನುಂಡು ಅನ್ಯರ ಹೊಗಳುವ ಕುನ್ನಿಗಳನೇನೆಂಬೆ, ರಾಮನಾಥ.
--------------
ಜೇಡರ ದಾಸಿಮಯ್ಯ
ಇರುಹೆಯ ತೆರನೇನು ನೆರೆ ಛಲವಿಲ್ಲದೆ ಮಾಡಿದವನ ಭಕ್ತ ಇರುಹೆಯಿಂದ ಕರಕಷ್ಟ ಕಾಣಾ! ರಾಮನಾಥ.
--------------
ಜೇಡರ ದಾಸಿಮಯ್ಯ
ಇಳೆಯನಾಧಾರ ಮಾಡಿ, ಜಳವ ಜೀವನ ಮಾಡಿ ಒಳಗಿಪ್ಪ ಭೇದವನು ವಾಯುವ ಕಂಬವ ಮಾಡಿ, ನಳನ ಚಂದ್ರಮನ ಮಡಗಿ ಆಕಾಶವನು ಗಳನೆ ಮುಚ್ಚಿದ ಬೆಳಗಿಗೆ ಆನು ಬೇಡಿಕೊಂಬೆ, ರಾಮನಾಥ.
--------------
ಜೇಡರ ದಾಸಿಮಯ್ಯ
ಇಂದಿಂಗೆಂತು ನಾಳಿಂಗೆಂತೆಂದು ಚಿಂತಿಸಲೇಕೆ? ತಂದಿಕ್ಕುವ ಶಿವಂಗೆ ಬಡತನವೆ? ರಾಮನಾಥ.
--------------
ಜೇಡರ ದಾಸಿಮಯ್ಯ
ಇತ್ತ ಬಾ ಎನ್ನದವನ ಹತ್ತೆ ಹೊದ್ದಲು ಬೇಡ. ಇತ್ತ ಬಾ ಎಂಬ ಸದ್ಭಕ್ತನ ಮನೆಯ ಬಾಗಿಲ ಹತ್ತಿಪ್ಪೆ ಕಾಣಾ! ರಾಮನಾಥ.
--------------
ಜೇಡರ ದಾಸಿಮಯ್ಯ
ಈ ಪದದಿಂದ ಪ್ರಾರಂಭವಾಗುವ ವಚನಗಳು:
ಈಶ! ನಿಮ್ಮ ಪೂಜಿಸಿದ ಬಳಿಕ ಅನ್ಯ ದೈವಂಗಳಿಗೆ ಹೇಸಲೇ ಬೇಕು. ಹೇಸದೆ ಅನ್ಯದೈವಕ್ಕೆ ಆಸೆ ಮಾಡಿದಡೆ ಅವ ನಮ್ಮ ಈಶ್ವರಂಗೆ ಹೊರಗು. ದೋಷರಹಿತ ಭಕ್ತರು ಅವಂಗೆ ಕುಲವೆಂದು ಕೂಸ ಕೊಟ್ಟು ಕೂಡುಂಡಡೆ ಮೀಸಲ ಬೋನವ ನಾಯಿ ಮುಟ್ಟಿದಂತೆ ಕಾಣಾ!ರಾಮನಾಥ.
--------------
ಜೇಡರ ದಾಸಿಮಯ್ಯ
ಈಶನ ಶರಣರು ವೇಶಿಯ ಹೋದಡೆ ಮೀಸಲೋಗರವ ಹೊರಗಿರಿಸಿದಡೆ ಹಂದಿ ಮೂಸಿ ನೋಡಿದಂತೆ ರಾಮನಾಥ.
--------------
ಜೇಡರ ದಾಸಿಮಯ್ಯ
ಉ ಪದದಿಂದ ಪ್ರಾರಂಭವಾಗುವ ವಚನಗಳು:
ಉರಿವ ತೃಣದ ಮೇಲೆ ಪುಣ್ಯವ ತಂದಿರಿಸಿದಡೆ ಆ ತೃಣವನ್ನು ಆ ಕೆಂಡ ನುಂಗುವಂತೆ ಗುರುಚರಣದ ಮೇಲೆ ತನುತೃಣವನಿರಿಸಿದಡೆ ಆ ತನುವೆಲ್ಲ ಲಿಂಗಮಯ ಕಾಣಾ! ರಾಮನಾಥ.
--------------
ಜೇಡರ ದಾಸಿಮಯ್ಯ
ಉಣ್ಣಿ ಕೆಚ್ಚಲ ಹತ್ತಿ ಉಂಬುದೆ ನೊರೆವಾಲ? ಪುಣ್ಯಕ್ಷೇತ್ರದಲ್ಲಿ ಹುಟ್ಟಿ ಉಣ್ಣದವನು ಆ ಉಣ್ಣಿಯಿಂದ ಕರಕಷ್ಟ! ರಾಮನಾಥ.
--------------
ಜೇಡರ ದಾಸಿಮಯ್ಯ
ಉಳುವನ ಹೆಳೆವನ ಉಳುವವನ ಕೊಲುವ ಬೇಡನ, ಹಿಳಿಲಿನಿಕ್ಕಿ ಕರದುಂಬ ಭಕ್ತನ ಒಳುಹನೇನೆಂಬೆ, ರಾಮನಾಥ.
--------------
ಜೇಡರ ದಾಸಿಮಯ್ಯ
ಉಂಕೆಯ ನಿಗುಚಿ ಸರಿಗೆಯ ಸಮಗೊಳಿಸಿ ಸಮಗಾಲನಿಕ್ಕಿ ಅಣಿಯೇಳ ಮುಟ್ಟದೆ ಹಿಡಿದ ಲಾಳಿಯ ಮುಳ್ಳು ಕಂಡಿಕೆಯ ನುಂಗಿತ್ತು. ಈ ಸೀರೆಯ ನೆಯ್ದವ ನಾನೊ ನೀನೋ?ರಾಮನಾಥ.
--------------
ಜೇಡರ ದಾಸಿಮಯ್ಯ
ಎ ಪದದಿಂದ ಪ್ರಾರಂಭವಾಗುವ ವಚನಗಳು:
ಎಣ್ಣೆಯಿದ್ದು ಎಳ್ಳು ನನೆಯದ ಭೇದವ ಕಿಚ್ಚಿದ್ದು ಕಲ್ಲು ಸಿಡಿಯದೆ ಭೇದವ ಕಾಮವಿದ್ದು ಕನ್ನೆಯನನುಭವಿಸದ ಭೇದವ ಪರವಿದ್ದು ಪ್ರಾಣನ ಪ್ರಕೃತಿಯ ಹರಿಯದ ಭೇದವ ನರರೆತ್ತ ಬಲ್ಲರೈ? ರಾಮನಾಥ.
--------------
ಜೇಡರ ದಾಸಿಮಯ್ಯ
ಎತ್ತನೇರಿದ ಕರ್ತನೊಬ್ಬನೆ ಜಗಕ್ಕೆಲ್ಲ ಎತ್ತು ಬೆಳೆದ ಧಾನ್ಯವನುಂಬ ದೇವರ್ಕಳೆಲ್ಲ ನಿಮ್ಮ ತೊತ್ತಿನ ಮಕ್ಕಳು ಕಾಣಾ! ರಾಮನಾಥ.
--------------
ಜೇಡರ ದಾಸಿಮಯ್ಯ
ಎತ್ತು ನಿಮ್ಮ ದಾನ; ಬಿತ್ತು ನಿಮ್ಮ ದಾನ. ಸುತ್ತಿ ಹರಿವ ಸಾಗರವೆಲ್ಲ ನಿಮ್ಮ ದಾನ. ನಿಮ್ಮ ದಾನವನುಂಡು ಅನ್ಯರ ಹೊಗಳುವ ಕುನ್ನಿಗಳನೇನೆಂಬೆ ಹೇಳ? ರಾಮನಾಥ.
--------------
ಜೇಡರ ದಾಸಿಮಯ್ಯ
ಎಂಜಲ ತಿಂಬರೆ ಅಂಜದೆ ಅಳುಕದೆ ತಿನಬೇಕು. ಅಂಜುತ ಅಳುಕುತ ತಿಂದರೆ ಅದು ನಂಜಿನಂತಕ್ಕು ಕಾಣಾ! ರಾಮನಾಥ.
--------------
ಜೇಡರ ದಾಸಿಮಯ್ಯ
ಎತ್ತಪ್ಪೆ ಶರಣಂಗೆ, ತೊತ್ತಪ್ಪೆ ಶರಣಂಗೆ ಭೃತ್ಯನಾಗಿ ಸದ್ಭಕ್ತರ ಮನೆಯ ಬಾಗಿಲು ಕಾಯ್ದಿಪ್ಪ ಸೊಣಗನಪ್ಪೆ. ಕರ್ತಾರ! ನಿನಗೆ ಕರವೆತ್ತಿ ಹೊಡವಡುವ ಭಕ್ತರ ಮನೆಯ ಹಿತ್ತಿಲ ಬೇಲಿಯಾಗಿಪ್ಪೆನಯ್ಯಾ,ರಾಮನಾಥ.
--------------
ಜೇಡರ ದಾಸಿಮಯ್ಯ
ಎಳ್ಳಿಲ್ಲದ ಗಾಣದಲ್ಲಿ ಎಣ್ಣೆಯುಂಟೆ? ಜಳ್ಳ ತೂರಿದಲ್ಲಿ ಬತ್ತವುಂಟೆ? ಕಳ್ಳ ಹಾದರಿಗರ ಸಂಪಾದನೆ ಹೊಳ್ಳ ಕುಟ್ಟಿ ಕೈ ಹೊಟ್ಟೆಯಾದಂತೆ ಕಾಣಾ! ರಾಮನಾಥ.
--------------
ಜೇಡರ ದಾಸಿಮಯ್ಯ
ಎನ್ನ ನಾನರಿವುದಕ್ಕೆ ಮುನ್ನ ಎಲ್ಲಿದ್ದೆಯಯ್ಯ? ಎನ್ನೊಳಗೆ ಇದ್ದೆಯಯ್ಯ! ಎನ್ನ ನಾನರಿಯಲು ಮುಂದೆ ಬಂದು ಗುರುರೂಪಾಗಿ ಎನ್ನೊಳಗೆ ಅಡಗಿದ್ದೆಯಲ್ಲ! ರಾಮನಾಥ.
--------------
ಜೇಡರ ದಾಸಿಮಯ್ಯ
ಎನ್ನೊಡಲಾದಡೆ ಎನ್ನಿಚ್ಛೆಯಲ್ಲಿರದೆ? ನಿನ್ನೊಡಲಾದಡೆ ನಿನ್ನಿಚ್ಛೆಯಲ್ಲಿರದೆ? ಅದು ಎನ್ನೊಡಲೂ ಅಲ್ಲ, ನಿನ್ನೊಡಲೂ ಅಲ್ಲ. ಅದು ನೀ ಮಾಡಿದ ಜಗದ ಬಿನ್ನಾಣದೊಡಲು ಕಾಣಾ!ರಾಮನಾಥ.
--------------
ಜೇಡರ ದಾಸಿಮಯ್ಯ
ಎಡರಡಸಿದಲ್ಲಿ ಮೃಡ! ನಿಮ್ಮ ನೆನವರು. ಎಡರಡಸಿದ ವಿಪತ್ತು ಕಡೆಯಾಗಲೊಡನೆ ಮೃಡ! ನಿಮ್ಮನೆಡಹಿಯೂ ಕಾಣರು! ರಾಮನಾಥ.
--------------
ಜೇಡರ ದಾಸಿಮಯ್ಯ
ಒ ಪದದಿಂದ ಪ್ರಾರಂಭವಾಗುವ ವಚನಗಳು:
ಒಳಗರಿದ ಭಕ್ತನ ಒಳಗಾದ ಲಿಂಗವು ಒಳಗಾದ ಲಿಂಗದೊಳಗಾದ ಭಕ್ತನ ಹೊರಗಾದ ಲಿಂಗವ ಒಳಗೆ ತಂದಿರಿಸಿ ಆ ಭಕ್ತನ ತನುವಿನ ವಳೆಯವನಿನ್ನೇನ ಹೇಳುವೆ! ರಾಮನಾಥ.
--------------
ಜೇಡರ ದಾಸಿಮಯ್ಯ
ಒಡಲುಗೊಂಡೆನಾಗಿ ಮೃಡ! ನಿಮಗೆ ಹಗೆಯಾದೆನಯ್ಯ. ಆನು ಒಡಲುಗೊಂಡಡೇನು? ಕಡಲೊಳಗಣ ಬೊಬ್ಬಳಿಕೆ ಕಡಲೊಳಗೆ ಆಳಿವಂತೆ ಎನ್ನ ಒಡಲಳಿದು ಹೋದಡೇನು? ಪ್ರಾಣ ನಿಮ್ಮ ಎಡೆಯಲಡಗುವದಯ್ಯಾ,ರಾಮನಾಥ.
--------------
ಜೇಡರ ದಾಸಿಮಯ್ಯ
ಒರತೆಗಳ ಕಂಡಿಂತು ಕೆಲರೀ ಬಾವಿಯ ತೋಡೆಂಬರು? ಅರವಟಿಗೆ ಛತ್ರವು ತಮ್ಮದೆಂಬರು! ಎಲೆ ಪಯಿರೈದದಿರೆ, ಸುರಿವ ಮಳೆ ಸುರಿಸದಿದ್ದಡೆ, ಅವರೇತರಲ್ಲಿ ನೀಡುವರಯ್ಯಾ! ರಾಮನಾಥ.
--------------
ಜೇಡರ ದಾಸಿಮಯ್ಯ
ಒಂದರಿವು ಒಂದು ನಡೆ ಒಂದು ಸ್ಥಾನದೊಳಗೆ ಒಂದು ಮುಂದೆ ಪ್ರಸಾದದಂತುವನರಿದಡೆ ನಿಶ್ಚಿಂತ ಪರಶಿವನು, ರಾಮನಾಥ.
--------------
ಜೇಡರ ದಾಸಿಮಯ್ಯ
ಒಕ್ಕುದು ಪ್ರಸಾದವಲ್ಲ, ಮಿಕ್ಕುದು ಪ್ರಸಾದವಲ್ಲ. ಹತ್ತೆ ಕರೆದಿಕ್ಕಿದುದು ಪ್ರಸಾದವಲ್ಲ. ತರ್ಕೈಸಿ ನಿಮ್ಮವನಪ್ಪಿಕೊಂಡಡೆ ಅದು ನಿಶ್ಚಯಪ್ರಸಾದ ಕಾಣಾ! ರಾಮನಾಥ.
--------------
ಜೇಡರ ದಾಸಿಮಯ್ಯ
ಒಡಲುಗೊಂಡವ ಹಸಿವ; ಒಡಲುಗೊಂಡವ ಹುಸಿವ ಒಡಲುಗೊಂಡವನೆಂದು ನೀನೆನ್ನ ಜರಿದೊಮ್ಮೆ ನುಡಿಯದಿರ! ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ! ರಾಮನಾಥ.
--------------
ಜೇಡರ ದಾಸಿಮಯ್ಯ
ಒಡಲಿಚ್ಛೆಗೆ ಭವಿಯ ಒಡಗೂಡಿಕೊಂಡು ಉಂಡು ಹಡಿಕೆಯ ತಿಂದ ನಾಯಿ ಮುಂದುಡೆ ಬಗುಳುವಂತೆ ಮೃಡನಿಲ್ಲದವನ ಮನೆಯ ಕೂಳು ಹೊಲೆಯರ ಮನೆಯ ಅಡಗಿಂದ ಕರಕಷ್ಟ ಕಾಣಾ! ರಾಮನಾಥ.
--------------
ಜೇಡರ ದಾಸಿಮಯ್ಯ
ಒಡೆಯರನೊಡಗೊಂಡು ಬಂದು ಕೈಗಡಿಗೆಯ ನೀರ ಕಯ್ಯಲ್ಲಿ ಕೊಟ್ಟು `ಒಡೆಯರೆ! ಕಾಲ ತೊಳಕೋ!' ಎಂಬುವನ ಮನೆಗೆ ಅಡಿಯಿಡಲಾಗದಯ್ಯಾ ಮೃಡಶರಣರು. ಒಡಲಿಚ್ಛೆಗೆ ಬಡಮನವ ಮಾಡಿ ಹೊಕ್ಕುಂಬವರ ಎನ್ನೆಡೆಗೆ ತೋರದಿರಾ, ರಾಮನಾಥ.
--------------
ಜೇಡರ ದಾಸಿಮಯ್ಯ
ಒಡಲುಗೊಂಡವ ನಾನು; ಪ್ರಾಣವಿಡಿದವ ನೀನು. ಎನ್ನೊಡಲು ಸಂಚುವ ನೀ ಬಲ್ಲೆ! ನಿನ್ನ ಪ್ರಾಣದ ಸಂಚುವ ನಾ ಬಲ್ಲೆ! ಇದು ಕಾರಣ, ಇದು ಎನ್ನೊಡಲಲ್ಲ ನಿನ್ನೊಡಲು. ನಿನ್ನ ಪ್ರಾಣವೆನ್ನಲ್ಲಿ ಅಡಗಿದ ಭೇದವ ನೀ ಬಲ್ಲೆ, ನಾ ಬಲ್ಲೆನೈ, ರಾಮನಾಥ.
--------------
ಜೇಡರ ದಾಸಿಮಯ್ಯ
ಒಲವಸವಿಲ್ಲದ ಭಕ್ತಿ, ಲವಲವಿಕೆಯಿಲ್ಲದ ಪೂಜೆ, ಸಲೆ ನಿಮ್ಮ ನಂಬಿಯೂ ನಂಬದವನ ಬಾಳುವೆ, ಹೊಲೆಯರ ನಾಯ ಹುಲುಸರವಿಯಿಂದ ಕರಕಷ್ಟಕಾಣ! ರಾಮನಾಥ.
--------------
ಜೇಡರ ದಾಸಿಮಯ್ಯ
ಒಂದಾಗಿಹವೈದು ಭೂತ ಚಂದ್ರ ಸೂರ್ಯರು ನಂದಿವಾಹನ ನಿಮ್ಮ ತನುವಲ್ಲವೆ? ನಿಂದು ನೋಡಲು ಜಗವಂದ್ಯನಾಗಿಪ್ಪೆ, ಇನ್ನು ನಿಂದಿಸುವೆನಾರನಯ್ಯ? ರಾಮನಾಥ.
--------------
ಜೇಡರ ದಾಸಿಮಯ್ಯ
ಒಡಲೊಳಗಣ ಕಿಚ್ಚು ಒಡಲ ಸುಡದ ಭೇದವ ಕುಡಿದ ಉದಕದಲ್ಲಿ ಆ ಕಿಚ್ಚು ನಂದದ ಭೇದವ ಮೃಢ! ನೀ ಪ್ರಾಣ ಪ್ರಕೃತಿಯೊಳಗೆ ಅಡಗಿದ ಭೇದವ ಲೋಕದ ಜಡರೆತ್ತ ಬಲ್ಲರೈ? ರಾಮನಾಥ.
--------------
ಜೇಡರ ದಾಸಿಮಯ್ಯ
ಅಂ ಪದದಿಂದ ಪ್ರಾರಂಭವಾಗುವ ವಚನಗಳು:
ಅಂತರಂಗ ಬಹಿರಂಗದಲ್ಲಿ ಸರ್ವಾಚಾರ ಸಂಪತ್ತಿನ ಆಚರಣೆಯನರಿಯದ ಮೂಢಾತ್ಮಂಗೆ ಲಿಂಗಾಂಗ ಸಮರಸವ ಹೇಳಿ ಸರ್ವಾಂಗ ಸ್ನಾನಧೂಳನ ನಾಲ್ವತ್ತೆಂಟು ಸ್ಥಾನಂಗಳಲ್ಲಿ ಧಾರಣ ಕ್ರಿಯಾಭಸಿತವ ಧರಿಸುವ ನಿರ್ಣಯವ ಹೇಳಿ ಅಂತರಂಗದ ಜಪವ ಹೇಳುವನೊಬ್ಬ ಆಚಾರದ್ರೋಹಿ ನೋಡಾ, ರಾಮನಾಥ.
--------------
ಜೇಡರ ದಾಸಿಮಯ್ಯ
ಅಂಬಲಿ ಅಲೆಯಾಗಿ, ತುಂಬೆಯ ಮೇಲೋಗರವಾಗಿ, ಉಂಬ ಸದುಭಕ್ತನ ಮನೆಯಾಗಿ, ಲೋಕದ ಡಂಭಕರ ಮನೆ ಬೇಡ, ರಾಮನಾಥ
--------------
ಜೇಡರ ದಾಸಿಮಯ್ಯ
ಅಂಗಲಿಂಗದ ಒಳಗೆ ಲಿಂಗಕಂಗಳು ಬೆಳಗು, ಹಿಂಗಲಾಪುದೆ ಹೇಳು ಅಜ್ಞಾನವ! ಸಂಗಸುಖಮಥನದ ಅಸಂಗದಿಂದದನರಿದು ಹಿಂಗಲಿಕೆ ಹೆಸರೇನು? ರಾಮನಾಥ.
--------------
ಜೇಡರ ದಾಸಿಮಯ್ಯ
ಅಃ ಪದದಿಂದ ಪ್ರಾರಂಭವಾಗುವ ವಚನಗಳು:
ಅಂತರಂಗ ಬಹಿರಂಗದಲ್ಲಿ ಸರ್ವಾಚಾರ ಸಂಪತ್ತಿನ ಆಚರಣೆಯನರಿಯದ ಮೂಢಾತ್ಮಂಗೆ ಲಿಂಗಾಂಗ ಸಮರಸವ ಹೇಳಿ ಸರ್ವಾಂಗ ಸ್ನಾನಧೂಳನ ನಾಲ್ವತ್ತೆಂಟು ಸ್ಥಾನಂಗಳಲ್ಲಿ ಧಾರಣ ಕ್ರಿಯಾಭಸಿತವ ಧರಿಸುವ ನಿರ್ಣಯವ ಹೇಳಿ ಅಂತರಂಗದ ಜಪವ ಹೇಳುವನೊಬ್ಬ ಆಚಾರದ್ರೋಹಿ ನೋಡಾ, ರಾಮನಾಥ.
--------------
ಜೇಡರ ದಾಸಿಮಯ್ಯ
ಅಂಬಲಿ ಅಲೆಯಾಗಿ, ತುಂಬೆಯ ಮೇಲೋಗರವಾಗಿ, ಉಂಬ ಸದುಭಕ್ತನ ಮನೆಯಾಗಿ, ಲೋಕದ ಡಂಭಕರ ಮನೆ ಬೇಡ, ರಾಮನಾಥ
--------------
ಜೇಡರ ದಾಸಿಮಯ್ಯ
ಅಂಗಲಿಂಗದ ಒಳಗೆ ಲಿಂಗಕಂಗಳು ಬೆಳಗು, ಹಿಂಗಲಾಪುದೆ ಹೇಳು ಅಜ್ಞಾನವ! ಸಂಗಸುಖಮಥನದ ಅಸಂಗದಿಂದದನರಿದು ಹಿಂಗಲಿಕೆ ಹೆಸರೇನು? ರಾಮನಾಥ.
--------------
ಜೇಡರ ದಾಸಿಮಯ್ಯ
ಕ ಪದದಿಂದ ಪ್ರಾರಂಭವಾಗುವ ವಚನಗಳು:
ಕೆಡಹಿದ ಚಿನ್ನದ ಎಡೆಯಣ ಮಣ್ಣವ ಹೆಡೆಗೆದುಂಬಲಾ ಚಿನ್ನದೋರಿ ಮೃಡ! ನಿಮ್ಮ ಶರಣರ ಎಡೆಗಳನರಿದ ಬಳಿಕ ಉಡುಗಿದ ಮಣ್ಣೇಕೆ? ರಾಮನಾಥ.
--------------
ಜೇಡರ ದಾಸಿಮಯ್ಯ
ಕಷೃಜಾತಿಗಳು ಲಿಂಗವ ಮುಟ್ಟಿ ಪೂಜಿಸಲಾಗದು. ಮುಟ್ಟಿದಡೆ ಮುಟ್ಟಿದಂತಿರಬೇಕು. ನಿಮ್ಮ ಮುಟ್ಟಿಯೂ ಹಿಂದಣ ಕುಲವ ಕೂಡಿದರಾದಡೆ ಮುಂದೆ ಹೊಲೆಯರ ಮನೆಯ ಹುಳಿತ ನಾಯ ಬಸುರಲಿ ಬಪ್ಪುದು ತಪ್ಪದು ಕಾಣಾ! ರಾಮನಾಥ.
--------------
ಜೇಡರ ದಾಸಿಮಯ್ಯ
ಕುಲಛಲವ ಬಿಟ್ಟು ನಿಮ್ಮನೊಲಿಸಿದ ಶರಣರಿಗೆ ತಲೆವಾಗುವೆ ನಾನು ಕುಲಜರೆಂದು. ಬೆಬ್ಬನೆ ಬೆರತು ನಿಮ್ಮನೊಲಿಸಿದ ಶರಣರಿಗೆ ತಲೆವಾಗದವನ ತಲೆ ಶೂಲದ ಮೇಲಣ ತಲೆ ಕಾಣಾ! ರಾಮನಾಥ.
--------------
ಜೇಡರ ದಾಸಿಮಯ್ಯ
ಕೀಳು ಡೋಹರ ಕಕ್ಕ; ಕೀಳು ಮಾದರ ಚೆನ್ನ. ಕೀಳು ಓಹಿಲದೇವ; ಕೀಳು ಉದ್ಭಟಯ್ಯ. ಕೀಳಿಂಗಲ್ಲದೆ ಹಯನು ಕರೆಯದು ಕಾಣಾ! ರಾಮನಾಥ.
--------------
ಜೇಡರ ದಾಸಿಮಯ್ಯ
ಕಳದೊಳಗಣ ಕಳವೆಯನೊಕ್ಕುವರೊಳಗದೆ ಶಿವಲಿಂಗ ಮುಕ್ಕಣ್ಣ! ನೀನೊಲಿದ ಸದ್ಭಕ್ತನ ಅಕ್ಕುಲಿಜನೆಂದಡೆ ಅಕ್ಷಯನರಕದಲ್ಲಿಕ್ಕುವ ಕಾಣಾ! ರಾಮನಾಥ.
--------------
ಜೇಡರ ದಾಸಿಮಯ್ಯ
ಕರಿಯನಿತ್ತಡೆ ಒಲ್ಲೆ, ಸಿರಿಯನಿತ್ತಡೆ ಒಲ್ಲೆ. ಹಿರಿದಪ್ಪ ರಾಜ್ಯವನಿತ್ತಡೆ ಒಲ್ಲೆ. ನಿಮ್ಮ ಶರಣರ ಸೂಳ್ನುಡಿಯ ಒಂದರೆಘಳಿಗೆಯಿತ್ತಡೆ ನಿನ್ನನಿತ್ತೆ ಕಾಣಾ! ರಾಮನಾಥ.
--------------
ಜೇಡರ ದಾಸಿಮಯ್ಯ
ಕರಸ್ಥಲವೆಂಬ ದಿವ್ಯ ಭೂಮಿಯಲ್ಲಿ ಮಹಾಘನಲಿಂಗ ನಿಕ್ಷೇಪವಾಗಿದೆ! ಈ ದಿವ್ಯ ನಿಕ್ಷೇಪವ ಸಾಧಿಸುವಡೆ ಅಂಜನಸಿದ್ಧಿಯಿಲ್ಲದೆ ಸಾಧಿಸಬಾರದು. ಲಿಪಿಯಿಲ್ಲದೆ ತೆಗೆವಡಸದಳ. ಆ ಲಿಪಿಯ ವ್ರಯವ ಷಟ್ತತ್ವದ ಮೇಲೆ ನಿಶ್ಚಯಿಸಿ. ಆ ನಿಶ್ಚಯದೊಳಗೆ ಈ ನಿಕ್ಷೇಪದ ಕರ್ತೃವಿನ ಹೆಸರೋದಿತ್ತು. ತಿಳಿಯಲೋದುವನ್ನಬರ ಆತ ನಮ್ಮ ಹೆತ್ತಯ್ಯನೆಂಬ ಹೆಸರೋದಿತ್ತು. ಆ ಓದಿಕೆಯ ಕಡೆಯಕ್ಕರದೊಳಗೆಅಂಜನಸಿದ್ಧಿ ಹೇಳಿತ್ತು. ಅದಾವ ಪರಿಕ್ರಮದ ಅಂಜನವೆಂದಡೆ ಅದೆಮ್ಮ ಹೆತ್ತಯ್ಯ ಜಗದ್ವಿಲಾಸ ತದರ್ಥವಾಗಿ ಆ ತನ್ನ ಮೂಲಶಕ್ತಿ ಸಂಭೂತವಾದುದು. ಅಲ್ಲಿ ಹುಟ್ಟಿದ ದಿವ್ಯ ಚಿತ್ಕಳೆಯಿಂದೊಗೆದ ದಿವ್ಯಭಸಿತವೆಂದಿತ್ತು. ಆ ದಿವ್ಯ ಭಸಿತವೆಂಬ ದಿವ್ಯಾಂಜನವ ತಳೆದುಕೊಂಡು ಅತಿ ವಿಶ್ವಾಸದಿಂದ ನಾನೆನ್ನ ಹಣೆಯೆಂಬ ಕಣ್ಣಿಂಗೆಚ್ಚಿ ಸರ್ವಾಂಗವ ತೀವಲೊಡನೆ ಕರಸ್ಥಲದೊಳಗಣ ನಿಕ್ಷೇಪ ಕಣ್ದೆರವಾಯಿತ್ತು. ಆ ಕಣ್ದೆರವಾದ ನಿಕ್ಷೇಪವ ಮುಟ್ಟಹೋದಡೆ ಅಲ್ಲಿ ನಮ್ಮ ಹೆತ್ತಯ್ಯನ ಹೊಳಹ ಕಂಡು ತಳವೆಳಗಾದೆ ಕಾಣಾ! ರಾಮನಾಥ.
--------------
ಜೇಡರ ದಾಸಿಮಯ್ಯ
ಕುಲಸ್ವಾಮಿ ನಿಮ್ಮವ ಒಲಿವುದ ಕಂಡಡೆ ತಲೆವಾಗುವೆ ಕಾತ ಕಳವೆಯಂತೆ ಕುಲಜ ನಾನೆಂದು ತಲೆವಾಗದಿದ್ದಡೆ ಸಲೆ ಶೂಲದ ತಲೆಯಯ್ಯಾ, ರಾಮನಾಥ.
--------------
ಜೇಡರ ದಾಸಿಮಯ್ಯ
ಕಣ್ಣು ಮೀಸಲು ಶಿವನು; ಕೈ ಮೀಸಲು ಶಿವನ. ಕಾಲು ಮೀಸಲು ಶಿವನ; ನಾಲಗೆ ಮೀಸಲು ಶಿವನ. ಕಿವಿ ಮೀಸಲು ಶಿವನ; ನಾಸಿಕ ಮೀಸಲು ಶಿವನ. ತನು ಮನವೆಲ್ಲಾ ಮೀಸಲು ಶಿವನ. ಈ ಮೀಸಲು ಬೀಸರವಾಗದಂತಿರ್ದಡೆ ಆತನೇ ಜಗದೀಶ ಕಾಣಾ! ರಾಮನಾಥ.
--------------
ಜೇಡರ ದಾಸಿಮಯ್ಯ
ಕುಲಸ್ವಾಮಿ ನೀ ನಿಂದ ಹಜ್ಜೆಯಲ್ಲದೆ ನಾನೊಂದು ಹೆಜ್ಜೆಯನಿಡೆನಯ್ಯ; ಎಗಗೊಂದು ಹಜ್ಜೆಯಿಲ್ಲ. ನಿನ್ನ ಹೆಜ್ಜೆ ಎನ್ನ ಹೆಜ್ಜೆ ಒಂದಾದ ಭೇದವ ಜಗದನ್ಯಾಯಿಗಳೆತ್ತ ಬಲ್ಲರೈ? ರಾಮನಾಥ.
--------------
ಜೇಡರ ದಾಸಿಮಯ್ಯ
ಕರಸ್ಥಲದ ಜ್ಯೋತಿಯಿದು. ಕರುವಿಟ್ಟ ಎರಕವಿದು. ಇದರ ನೆಲೆಯ ತಿಳಿದು ನೋಡಿದಡೆ ನಿಜದಾನಂದವು. ಹೊಲಬುದೋರದ ನಿಸ್ಸಂಗದ ಹೊಲಬನರಿದು ಕೂಡಿದಾತನೆ ಶರಣ ಕಾಣಾ! ರಾಮಾನಾಥ.
--------------
ಜೇಡರ ದಾಸಿಮಯ್ಯ
ಕತ್ತೆ ಬಲ್ಲುದೆ ಕಸ್ತೂರಿಯ ವಾಸನೆಯ? ತೊತ್ತು ಬಲ್ಲಳೆ ಗುರುಹಿರಿಯರುತ್ತಮರೆಂಬುದ? ಭಕ್ತಿಯನರಿಯದ ವ್ಯರ್ಥಜೀವಿಗಳು ನಿಮ್ಮವರನೆತ್ತ ಬಲ್ಲರೈ? ರಾಮನಾಥ.
--------------
ಜೇಡರ ದಾಸಿಮಯ್ಯ
ಕಡುಭಸಿತವ ಹೂಸಿ, ಮುಡಿಯಲ್ಲಿ ಲಿಂಗವ ಧರಿಸಿ, ಮಂತ್ರಮೂರ್ತಿಯ ಮನವಾರೆ ಪೂಜಿಸಿ, ಭಕ್ತಿ ವೇಷವ ಹೊತ್ತು ಭಕ್ತನೆನಿಸಿದ ಬಳಿಕ ಭವಿಯ ಮನೆಯನ್ನವ ನಾಯಡಗು, ನರರು ಹೇಸಿದ ಅಮೇಧ್ಯವೆಂದೆ ಕಾಣಬೇಕು. ಹೀಗಲ್ಲದೆ ಒಡಲಿಚ್ಛೆಗೆ ತುಡುಗಣಿ ನಾಯಂತೆ ಒಡಲ ಹೊರೆವವರ ಮೆಚ್ಚ, ನಮ್ಮ ರಾಮನಾಥ.
--------------
ಜೇಡರ ದಾಸಿಮಯ್ಯ
ಕಡೆಗೀಲಿಲ್ಲದ ಬಂಡಿ ಹೊಡೆಗೆಡೆಯದೆ ಮಾಣ್ಬುದೆ? ಕಡೆಗೀಲು ಬಂಡಿಗಾಧಾರ. ಈ ಕಡುದರ್ಪವೇರಿದ ಒಡಲೆಂಬ ಬಂಡಿಗೆ ಮೃಢಭಕ್ತರ ನುಡಿಗಡಣವೆ ಕಡೆಗೀಲು ಕಾಣಾ! ರಾಮನಾಥ.
--------------
ಜೇಡರ ದಾಸಿಮಯ್ಯ
ಕಾಯ ನಿಮ್ಮ ದಾನ; ಜೀವ ನಿಮ್ಮದಾನ. ಕಾಯ ಜೀವ ಉಳ್ಳಲ್ಲಿಯೇ ನಿಮ್ಮ ಪೂಜಿಸದ ನಾಯಿಗಳನೇನೆಂಬೆ ಹೇಳ? ರಾಮನಾಥ.
--------------
ಜೇಡರ ದಾಸಿಮಯ್ಯ
ಕಂಚುಮುಟ್ಟು ಕಲ್ಲುಗುಂಡುಗಳೇರುವಣ್ಣಗಳು ನೀವು ಕೇಳಿರೆ! ಘಂಟೆಯ ನುಡಿಸಿ ಶಿವನನುಂಟುಮಾಡಿಕೊಂಡಿಹೆನೆಂಬಿರಿ. ಆ ಘಂಟೆಯ ಧ್ವನಿಗೆ ಒಂದು ಗೋಟಡಕೆಯ ಸೋಲ, ಗುರು ರಾಮನಾಥನು.
--------------
ಜೇಡರ ದಾಸಿಮಯ್ಯ
ಕಲಿವೀರ ಕಡಿವಲ್ಲಿ, ಬಲುವಿಷವು ಸುಡಿವಲ್ಲಿ ನೆಲೆಗೆಟ್ಟು ಮೊರೆಯೊ! ಎಂಬಲ್ಲಿ ನಿಮ್ಮ ತಲೆಗಾದು ರಕ್ಷಸಿದ ಸುಲಭನನರಿಯಿರೆ ಹೊಲೆಯರಿರ! ಸಲೆ ನಂಬಿ ಬದುಕಿರೊ, ರಾಮನಾಥನ.
--------------
ಜೇಡರ ದಾಸಿಮಯ್ಯ
ಕಡಿಗಳ ಹದಿನೆಂಟನೊಡಗೂಡಿ ಸಂಧಿಸಿ ತೊಡಚಿ ಕಟ್ಟಿದೆ ನರರ ಬಂಧನದಲ್ಲಿ. ಈ ತೊಡಹದ ನಾಯ ನಿಚ್ಚ ನೀನಿಕ್ಕಿ ಕೆಡಿಸಿದೆಯಯ್ಯಾ, ರಾಮನಾಥ.
--------------
ಜೇಡರ ದಾಸಿಮಯ್ಯ
ಖ ಪದದಿಂದ ಪ್ರಾರಂಭವಾಗುವ ವಚನಗಳು:
ಖಂಡಿತವಿಲ್ಲದ ಅಖಂಡಿತ ನೀನೆ. ನಿಮ್ಮ ಕಂಡವರುಂಟೆ? ಹೇಳಯ್ಯ. ಕಂಡೆನೆಂಬವರೆಲ್ಲ ಬಂಜೆಯ ಮಕ್ಕಳು ನೀ ನಿಂದ ಹಜ್ಜೆಯ ಕೆಳಗೆ ಒಂದು ಬಿಂದು ಹುಟ್ಟಿ ಬೆಳಗುವ ಛಂದವ ಕಂಡು ಕಣ್ದೆರೆದೆ ಕಾಣಾ! ರಾಮನಾಥ.
--------------
ಜೇಡರ ದಾಸಿಮಯ್ಯ
ಗ ಪದದಿಂದ ಪ್ರಾರಂಭವಾಗುವ ವಚನಗಳು:
ಗುರುಭಕ್ತನಾದಲ್ಲಿ ಘಟಧರ್ಮವಳಿದು ಲಿಂಗಭಕ್ತನಾದಲ್ಲಿ ಮನಸಂಚಲ ನಿಂದು ಜಂಗಮಭಕ್ತಿಯಲ್ಲಿ ಧನದಾಸೆಯಳಿದು ತ್ರಿವಿಧಾಂಗ ಸಲೆ ಸಂದು ತ್ರಿಕರಣ ಶುದ್ಧನಾಗಿದ್ದವಂಗೆ ಮತ್ರ್ಯ ಕೈಲಾಸವೆಂಬ ಕಾಳುಮಾತಿಲ್ಲ ಆತ ನಿಶ್ಚಿಂತ ನಿಜಮುಕ್ತನಯ್ಯಾ, ರಾಮನಾಥ.
--------------
ಜೇಡರ ದಾಸಿಮಯ್ಯ
ಗಂಡನುಳ್ಳಮ್ಮನ ಗೌರಿಯೆಂದು ಕಂಡಡೆ ಭೂಮಂಡಳಕ್ಕೆ ಅರಸಾಗಿ ಹುಟ್ಟುವನಾತನು. ಗಂಡನುಳ್ಳಮ್ಮನ ಕಂಡು ಒಡವೆರದಾತ ನರಕದಲ್ಲಿ ದಿಂಡುಗೆಡದಿಪ್ಪನೈ, ರಾಮಾನಾಥ.
--------------
ಜೇಡರ ದಾಸಿಮಯ್ಯ
ಗಿರಿಗಳೆಲ್ಲ ಕೂಡಿ ಮೇರುಗಿರಿಗೆ ಸರಿಯಾಗಬಲ್ಲವೆ? ತರುಗಳೆಲ್ಲ ಕೂಡಿ ಕಲ್ಪತರುವಿಗೆ ಸರಿಯಾಗಬಲ್ಲವೆ? ಸರಿಯಿಲ್ಲ ನೋಡಾ ನಮ್ಮ ಭಕ್ತರಿಗೆ ನರರು ಸುರರು ಸರಿಯಲ್ಲ ನೋಡಾ! ಪರುಷಕ್ಕೆ ಪಾಷಾಣ ಸರಿಯೆ? ಮರುಜವಣಿಗೆ ಔಷಧ ಸರಿಯೇ? ಇದು ಕಾರಣ, ಶಿವಭಕ್ತರ್ಗೆ ಲೋಕದವರು ಸರಿಯೆಂದರೆ ನರಕ ತಪ್ಪದಯ್ಯಾ, ರಾಮಾನಾಥ.
--------------
ಜೇಡರ ದಾಸಿಮಯ್ಯ
ಗುರು ಲಿಂಗ ಒಂದೆಂಬರು. ಗುರು ಲಿಂಗ ಒಂದಾದ ಠಾವ ತಿಳಿದು ನೋಡಿರೆ. ಗುರು ಕಾರುಣ್ಯವಾದ ಬಳಿಕ ಅಂಗದ ಮೇಲೆ ಲಿಂಗವಿರಬೇಕು. ಲಿಂಗವಿಲ್ಲದ ಗುರುಕಾರುಣ್ಯವು ಬತ್ತಿದ ಕೆರೆಯಲ್ಲಿ ತಾವರೆಯ ಬಿತ್ತದಂತೆ ಕಾಣಾ!ರಾಮನಾಥ.
--------------
ಜೇಡರ ದಾಸಿಮಯ್ಯ
ಗುರು ನಿರೂಪವ ಮರದು ಪರವಧುವ ನೆರವರು; ಪರವಧುವನಳುಪುವರು. ಗುರುವಿಲ್ಲವವರಿಗೆ! ಪರವಿಲ್ಲವವರಿಗೆ! ಇಂತಪ್ಪ ನರಕಿಗಳನೆನೆಗೊಮ್ಮೆ ತೋರದಿರಾ,ರಾಮನಾಥ.
--------------
ಜೇಡರ ದಾಸಿಮಯ್ಯ
ಗಂಡ ಭಕ್ತನಾಗಿ, ಹೆಂಡತಿ ಭವಿಯಾದಡೆ ಉಂಡ ಊಟ ಇಬ್ಬರಿಗೂ ಸರಿಭಾಗ! ಸತ್ತ ನಾಯ ತಂದು ಅಟ್ಟದ ಮೇಲಿಳುಹಿ ಒಬ್ಬರೊಪ್ಪಚ್ಚಿಯ ಹಂಚಿಕೊಂಡು ತಿಂಬಂತೆ! ರಾಮನಾಥ.
--------------
ಜೇಡರ ದಾಸಿಮಯ್ಯ
ಗುರು ಕರುಣಿಸಲು ಸಂಸಾರ ವಿಷಯ ಕೆಟ್ಟಿತ್ತು. ಮಾಯಾ ಪ್ರಪಂಚು ಬಿಟ್ಟಿತ್ತು. ಮುಂದಣ ಹುಟ್ಟರತು ಹೋಯಿತ್ತು. ನೆಟ್ಟಗೆ ಗುರುಪಾದವ ಮುಟ್ಟಿ ಭವಗೆಟ್ಟೆನು ಕಾಣಾ! ರಾಮನಾಥ.
--------------
ಜೇಡರ ದಾಸಿಮಯ್ಯ
ಘ ಪದದಿಂದ ಪ್ರಾರಂಭವಾಗುವ ವಚನಗಳು:
ಘಟದೊಳಗೆ ತೋರುವ ಸೂರ್ಯನಂತೆ ಸರ್ವರಲ್ಲಿ ಶಿವನ ಚೈತನ್ಯವಿಪ್ಪುದು. ಇದ್ದರೇನು? ಅದ ಕೂಡುವರೆ ಗುರುವಿನಿಂದಲ್ಲದಾಗದು ಕಾಣಾ! ರಾಮನಾಥ.
--------------
ಜೇಡರ ದಾಸಿಮಯ್ಯ
ಘಟವನೊಡದು ಬಯಲ ನೋಡಲದೇಕೆ? ಘಟದೊಳಗಿಪ್ಪುದೆ ಬಯಲೆಂದರಿದಡೆ ಸಾಲದೆ? ಪಟವ ಹರಿದು ತಂತುವ ನೋಡಲದೇಕೆ? ಆ ಪಟವೆ ತಂತುವೆಂದರಿದಡೆ ಸಾಲದೆ? ಕಟಕವ ಮುರಿದು ಕಾಂಚನವ ನೋಡಲದೇಕೆ? ಆ ಕಟಕವೆ ಕಾಂಚನವೆಂದರಿದಡೆ ಸಾಲದೆ? ತನ್ನನಳಿದು ಘನದ ನೋಡಲದೇಕೆ? ತಾನೆ ಘನವೆಂದರಿದಡೆ ಸಾಲದೆ? ಹೇಳಾ! ರಾಮನಾಥ.
--------------
ಜೇಡರ ದಾಸಿಮಯ್ಯ
ಚ ಪದದಿಂದ ಪ್ರಾರಂಭವಾಗುವ ವಚನಗಳು:
ಚಿನ್ನದೊಳಗಣ ಬಣ್ಣವ ಆ ಚಿನ್ನ ತನ್ನ ತಾನರಿವುದೆ? ಕಬ್ಬು ರುಚಿಸಬಲ್ಲುದೆ ತನ್ನ ತಾನೆ? ಈ ಪರಿಯಂತೆ ನರರರಿವರೆ ಕ್ರಿಯಾಜ್ಞಾನ ಭೇದವ?ರಾಮನಾಥ.
--------------
ಜೇಡರ ದಾಸಿಮಯ್ಯ
ಜ ಪದದಿಂದ ಪ್ರಾರಂಭವಾಗುವ ವಚನಗಳು:
ಜ್ವರ ಬಡಿದ ಬಾಯಿಗೆ ನೊರೆವಾಲು ಉರಸುವದೆ? ನರಕದಲ್ಲಿ ಬೀಳುವ ಮನುಜರಿಗೆ ಶಿವಭಕ್ತಿಯೆಂಬುದು ಕಿರುಗಹಿ ಕಾಣಾ! ರಾಮನಾಥ.
--------------
ಜೇಡರ ದಾಸಿಮಯ್ಯ
ಜ್ವರ ಪೀಡಿಸಿದ ಮನುಜರಿಗೆ ನೊರೆವಾಲು ಸೊಗಸುವದೆ? ಭವಜನ್ಮದಲ್ಲಿ ಬರುವ ಕ್ರೂರಕರ್ಮಿಗಳಿಗೆ ಶಿವಾಚಾರವ ಹೇಳಿದಡೆ ಹಗೆಯ ಮಾಡುವರು ಕಾಣಾ! ರಾಮನಾಥ.
--------------
ಜೇಡರ ದಾಸಿಮಯ್ಯ
ಜಂಬೂದ್ವೀಪವನೆಲ್ಲ ತಿರಿಗಿದಡೇನು? ಜಂಬುಕ ಶಂಭುದ್ಯಾನದಲ್ಲಿ ಸೈವೆರಗಪ್ಪುದೆ? ಕುಂಭಿನಿಯ ತಿರಿಗಿ ಕೋಟಿ ತೀರ್ಥವ ಮಿಂದಡೇನು? ಶಂಭು! ನಿಮ್ಮಲ್ಲಿ ಸ್ವಯವಾಗದವನು ಕುಂಭಿನಿಯ ತಿರಿಗಿದ ಡೊಂಬನಂತೆ ಕಾಣಾ!ರಾಮನಾಥ.
--------------
ಜೇಡರ ದಾಸಿಮಯ್ಯ
ಜಗದೊಳಗಣ ಮನುಜರು ಸೋಗೆಗನಂತಿಪ್ಪರು. ಸೋಗೆಗನಾಡಿಸುವ ಓಜೆ ಬೇರೈ. ಸೋಗೆಗಳನೀಡಾಡಿ ಓಜ ತಾ ಹೋದರೈ ಸೋಗೆಗ ನುಡಿಯಬಲ್ಲದೆ? ರಾಮನಾಥ.
--------------
ಜೇಡರ ದಾಸಿಮಯ್ಯ
ತ ಪದದಿಂದ ಪ್ರಾರಂಭವಾಗುವ ವಚನಗಳು:
ತನ್ನೊಳಗಣ ಅರಿವು ತನ್ನಲ್ಲಿಯೇ ತೋರಿದಲ್ಲದೆ ಅನ್ಯರಲ್ಲಿ ತೋರಬಲ್ಲದೆ? ತನ್ನಲ್ಲಿ ತಾನೆ ಇದ್ದಿತ್ತು. ತನ್ನ ತಾನೆ ಪಕ್ಷಕ್ಕೆ ಬಂದು ತನ್ನಲ್ಲಿ ಹುಟ್ಟಿದ ನೆನಹಿನ ಬಿನ್ನಾಣವನೇನೆಂಬೆನಯ್ಯಾ ರಾಮನಾಥ.
--------------
ಜೇಡರ ದಾಸಿಮಯ್ಯ
ತೊಡೆಯಲ್ಲಿ ಮುದ್ರೆಯನೊತ್ತಿದಡೇನು? ಅದು ನಡೆಯಲ್ಲಿ ಶುಚಿಯಾಗಬಲ್ಲುದೆ? ಮಡಿಲಲ್ಲಿ ಲಿಂಗವ ಕಟ್ಟಿದಡೇನೊ? ಲೋಕದ ಆಜ್ಞಾನಿತನ ಬಿಡುವುದೆ? ನಡೆ ನುಡಿ ಸತ್ಯಸದಾಚಾರಿಗಳು ಎಡೆಯೆಡೆಗೊಬ್ಬರು ಕಾಣಾ! ರಾಮನಾಥ.
--------------
ಜೇಡರ ದಾಸಿಮಯ್ಯ
ತೀವಿ ಕುಳ್ಳಿರ್ದ ಸಭೆ ಈಯಬಲ್ಲುದೆ ದಾನವ? ಸಾವರೆ ಸಂಗ್ರಾಮಕ್ಕೆ ಹೋದವರೆಲ್ಲ? ಇರಿಯಬಲ್ಲರೆ ನೂರಕ್ಕೊಬ್ಬ ಸಹಸ್ರಕ್ಕೊಬ್ಬ. ಹುಣಿಸೆಯ ಹೂವೆಲ್ಲ ಕಾಯಾಗಬಲ್ಲುದೆ?ರಾಮನಾಥ.
--------------
ಜೇಡರ ದಾಸಿಮಯ್ಯ
ತಲೆಯಿಲ್ಲದ ಗುರು, ಕಾಲಿಲ್ಲದೆ ನಿಂದ ನೋಡ! ಒಡಲಿಲ್ಲದ ಶಿಷ್ಯನಾದ ಪರಿಯ ನೋಡ! ಗುರುವಿನ ಒಡಲ ಬಗೆಯ ಹುಟ್ಟಿದಾತ ಒಡನೆ ಗುರುಸಹಿತ ನಿಂದ ನಿಲವನೇನೆಂಬೆನಯ್ಯಾ!ರಾಮನಾಥ.
--------------
ಜೇಡರ ದಾಸಿಮಯ್ಯ
ತನು ತನ್ನ ದೆಸೆಯಲೇಸು ದಿನವಿರ್ದಡೇನು? ಮನ ತನ್ನ ಹರಿದತ್ತ ಹರಿದ ಬಳಿಕ. ಕೆನೆಯಿಲ್ಲದ ಮೊಸರ ಕಡೆದಡೆ ಅಲ್ಲಿ ಒಂದು ಹನಿ ತುಪ್ಪವಿಲ್ಲ ಕಾಣಾ! ರಾಮನಾಥ.
--------------
ಜೇಡರ ದಾಸಿಮಯ್ಯ
ತಾಯ ಗರ್ಭದ ಶಿಶು ತಾಯ ಕುರುಹನರಿಯದು. ಆ ತಾಯಿ ಶಿಶುವಿನ ಕುರುಹನೆಂದೂ ಅರಿಯಳು. ಮಾಯಾಮೋಹದಲ್ಲಿಪ್ಪ ಭಕ್ತರು ದೇವರನರಿಯರು. ಆ ದೇವರು ಆ ಭಕ್ತರನೆಂದೂ ಅರಿಯನು ಕಾಣಾ! ರಾಮನಾಥ.
--------------
ಜೇಡರ ದಾಸಿಮಯ್ಯ
ದ ಪದದಿಂದ ಪ್ರಾರಂಭವಾಗುವ ವಚನಗಳು:
ದರುಶನ ತಪ್ಪುಕ ಪ್ರಥಮ ಪಾತಕ. ಪರುಶನ ತಪ್ಪುಕ ದ್ವಿತೀಯ ಪಾತಕ. ಗುರು ತಪ್ಪುಕ ತೃತೀಯ ಪಾತಕ. ಪಾರದ್ವಾರಿ ಚತುರ್ಥ ಪಾತಕ. ಮಾಂಸಾಹಾರಿ ಪಂಚಮ ಮಹಾ ಪಾತಕ. ಈ ಅಯ್ವರೊಡನೆ ನುಡಿಯಲಿಲ್ಲಯ್ಯ ರಾಮನಾಥ.
--------------
ಜೇಡರ ದಾಸಿಮಯ್ಯ
ದಾಸಿ ವೇಶಿ ಮದ್ದು ಮಾಂಸ ಸುರೆ ಭಂಗಿ ಹೊಗೆ ಅನ್ಯದೈವ ಭವಿಸಂಗ-ಇಷ್ಟುಳ್ಳನ್ನಕ್ಕ ಅವ ಭಕ್ತನಲ್ಲ, ಜಂಗಮನಲ್ಲ. ಅವರಿಬ್ಬರ ಮೇಳಾಟವೆಂತೆಂದಡೆ ಹೀಹಂದಿ ಹಡಿಕೆಯ ತಿಂದು ಅವು ಒಂದರ ಮೋರೆಯನೊಂದು ಮೂಸಿದಂತೆ ಕಾಣಾ! ರಾಮನಾಥ.
--------------
ಜೇಡರ ದಾಸಿಮಯ್ಯ
ದೇಹಗೊಂಡು ಹುಟ್ಟಿದವರು ಒಪ್ಪಚ್ಚಿದೇಹಾರವ ಮಾಡುವಿರಯ್ಯ. ದೇಹಾರವ ಮಾಡಿ ಲಿಂಗಾರ್ಪಿತವ ಮಾಡದೆ ಆಹಾರವ ಕೊಂಡಡೆ ಕೋಳಿ ಹುಳವನಾಯ್ದುತಿಂದಂತೆ ಕಾಣಾ! ರಾಮನಾಥ.
--------------
ಜೇಡರ ದಾಸಿಮಯ್ಯ
ದಾಸನ ಕುಲವಾದಾತ ಈಶಂಗಲ್ಲದೆ ಶರಣೆನ್ನ. ಆಸೆ ಮಾಡ, ನೋಡ ಅನ್ಯದೈವಂಗಳಿಗೆ. ದೇಶದ ಪಿಶಾಚಿಗಳಿಗೆ ಆಶೆ ಮಾಡ ನೋಡ! ಆಶೆ ಮಾಡಿದನಾದಡೆ ಅವ ದಾಸನ ಕುಲವಲ್ಲ ಅವ ಅನ್ಯಕುಲ ಕಾಣಾ! ರಾಮನಾಥ.
--------------
ಜೇಡರ ದಾಸಿಮಯ್ಯ
ಧ ಪದದಿಂದ ಪ್ರಾರಂಭವಾಗುವ ವಚನಗಳು:
ಧರಣಿಯ ಪಸರಿಸಿ, ಉರಗನನಡಿಯಿಟ್ಟು ಶರದ್ಥಿಯೇಳಕ್ಕೆ ಎರದನೊಕ್ಕುಡಿತೆ ಉದಕವ ಹರಿಯಜ ಸುರರಿಗೆ ಪರಿಪರಿಯ ಲೋಕವ ಕೊಟ್ಟು ಅರಿದಂತಿರ್ದ ಕಾಣಾ! ರಾಮನಾಥ
--------------
ಜೇಡರ ದಾಸಿಮಯ್ಯ
ಧರ್ಮವನೆತ್ತುವವರ ಮಹಾಧರ್ಮಿಗಳೆಂದೆಂಬಿರಿ. ನಿಮ್ಮ ಧರ್ಮವನಾರು ಅರಿದವರಿಲ್ಲ! ಧರ್ಮಗಳಿನಿಕ್ಕಿ ಉತ್ತ ಭೂಮಿಯೆ ಡೊಣಿ ನೀನೆಮ್ಮನೆಲ್ಲರ ನೋಡಿ ಸಲಹಿದೈ, ರಾಮನಾಥ.
--------------
ಜೇಡರ ದಾಸಿಮಯ್ಯ
ನ ಪದದಿಂದ ಪ್ರಾರಂಭವಾಗುವ ವಚನಗಳು:
ನೆರೆ ನಂಬಿ-ಕರೆದಡೆ ನರಿ ಕುದುರೆಯಾಗಿ ಹರಿವೆ? ಜಗವೆಲ್ಲಾ ಅರಿಯಲು ತೊರೆಯೊಳಗೆ ಬಿದ್ದ ಲಿಂಗ ಕರೆದಡೆ ಬಂದುದು ಕರಸ್ಥಲಕ್ಕೆ. ನಂಬದೆ ಕರೆದವರ ಹಂಬಲನೊಲ್ಲನೆಮ್ಮ ರಾಮನಾಥ.
--------------
ಜೇಡರ ದಾಸಿಮಯ್ಯ
ನಡೆ ನೋಟ ಸೊಲ್ಲೆಡೆಯಲ್ಲಿ ಒಂದು ಕಿಚ್ಚು. ಮಡದಿ ಪುರುಷರೆಡೆಯಲ್ಲಿ ಒಂದು ಕಿಚ್ಚು. ತಡದುಂಬೆಡೆಯಲ್ಲಿ ಒಂದು ಕಿಚ್ಚು. ಪಡೆದರ್ಥ ಕೆಟ್ಟೆಡೆಯಲ್ಲಿ ಒಂದು ಕಿಚ್ಚು. ಕೂಡಿದ ವ್ಯಾಮೋಹದೆಡೆಯಲ್ಲಿ ಒಂದು ಕಿಚ್ಚು. ಇಂತೀ ಐದು ಕಿಚ್ಚನಿಕ್ಕಿ ಬಾಯಲ್ಲಿ ಮಣ್ಣಹೊಯಿದು ಕೆಡಿಸಿದೆ! ರಾಮನಾಥ.
--------------
ಜೇಡರ ದಾಸಿಮಯ್ಯ
ನೆರೆದರೆ ಗಣಂಗಳು! ಹರದಡೆ ಕಂಚುಗಾರರು! ಲಿಂಗವ ಮಾರಿ ಉಂಬ ಭಂಗಾರರು! ತಮ್ಮ ತಳಿಗೆಯ ಕೊಂಡು ಹೋಗಿ ಅನ್ಯರ ಮನೆಯಲುಂಬ ಕುನ್ನಿಗಳನೇನೆಂಬೆ?ರಾಮನಾಥ.
--------------
ಜೇಡರ ದಾಸಿಮಯ್ಯ
ನಿಜವುಂಡ ನಿರ್ಮಲದಲೊದಗಿದ ಜ್ಯೋತಿಯನು ಮರಳಿ ಪ್ರಸಾದರೂಪು ತಾನಾಗಿ ನಿಜ ನಿಂದು ಬ್ರಹ್ಮಾಂಡ ಬೆಳಗಿ ತೋರುತ್ತದೆ ಮಹಾಪ್ರಸಾದಿಯಲ್ಲಿ ರಾಮನಾಥ.
--------------
ಜೇಡರ ದಾಸಿಮಯ್ಯ
ನಿಷೆ*ಯುಳ್ಳ ಭಕ್ತ ನಟ್ಟಡವಿಯಲ್ಲಿದ್ದಡೇನು? ಅದು ಪಟ್ಟಣವೆಂದೆನಿಸೂದು! ನಿಷೆ*ಯಿಲ್ಲದ ಭಕ್ತ ಪಟ್ಟಣದಲ್ಲಿದ್ದಡೂ ಅದು ನಟ್ಟಡವಿ ಕಾಣಾ! ರಾಮನಾಥ.
--------------
ಜೇಡರ ದಾಸಿಮಯ್ಯ
ನಾನೊಂದು ಸುರಗಿಯನೇನೆಂದು ಹಿಡಿವೆನು? ಏನ ಕಿತ್ತೇನನಿರಿವೆನು? ಜಗವೆಲ್ಲಾ ನೀನಾಗಿಪ್ಪೆ ಕಾಣಾ! ರಾಮನಾಥ.
--------------
ಜೇಡರ ದಾಸಿಮಯ್ಯ
ನೀನೀಶನೀಯದೆ ಮಾನಿಸನೀವನೆ? ನೀನೀಸುವ ಕಾರಣ ಮಾನಿಸನೀವನು. ಆ ಮಾನಿಸನ ಹೃದಯದೊಳು ಹೊಕ್ಕು ನೀನೀಸುವ ಕಾರಣದಿಂದ ನೀನೆ ಶರಣೆಂಬೆನಯ್ಯಾ, ರಾಮನಾಥ.
--------------
ಜೇಡರ ದಾಸಿಮಯ್ಯ
ನಿಡಿದೊಂದು ಕೋಲುವನು ಕಡಿದು ಎರಡ ಮಾಡಿ ಅಡಿಯ ಹೆಣ್ಣ ಮಾಡಿ, ಒಡತಣದ ಗಂಡ ಮಾಡಿ ನಡುವೆ ಹೊಸದಡೆ ಹುಟ್ಟಿದ ಕಿಚ್ಚು ಹೆಣ್ಣೊ ಗಂಡೊ? ರಾಮನಾಥ.
--------------
ಜೇಡರ ದಾಸಿಮಯ್ಯ
ನಂಬಿ ನಚ್ಚಿದೆನೆಂದು ಮನವನಿಂಬುಗೊಡದಿರು. ಕಾಯದ ಮಾಯದ ಕಪಟ ಕರ್ಮ ಸಂಸಾರಕ್ಕೆ ತನು ಮನ ಧನದಲ್ಲಿ ನೆನಹುಳ್ಳವರ ಕನಸಿನಲ್ಲಿ ಅರಿಯ, ನಮ್ಮ ರಾಮನಾಥ.
--------------
ಜೇಡರ ದಾಸಿಮಯ್ಯ
ನಂಬಿದ ಚೆನ್ನನ ಅಂಬಲಿಯನುಂಡ. ಕೆಂಬಾವಿಯ ಭೋಗಯ್ಯನ ಹಿಂದಾಡಿಹೋದ. ಕುಂಭದ ಗತಿಗೆ ಕುಕಿಲಿರಿದು ಕುಣಿದ. ನಂಬದೆ ಕರೆದವರ ಹಂಬಲನೊಲ್ಲನೆಮ್ಮ ರಾಮನಾಥ.
--------------
ಜೇಡರ ದಾಸಿಮಯ್ಯ
ಪ ಪದದಿಂದ ಪ್ರಾರಂಭವಾಗುವ ವಚನಗಳು:
ಪರವಧುವ ನೆರೆಯದೆ; ಪರಧನವ ತುಡುಕದೆ. ಪರದೈವದಿಚ್ಚೆವಡೆಯದೆ ಗುರು ಲಿಂಗ ಜಂಗಮಕ್ಕೆ ವರದಾಸನಾದಾತನೆ ಧರೆ ಮೂರಕ್ಕೆ ಗುರುವಾಗಿಪ್ಪನೈ, ರಾಮನಾಥ.
--------------
ಜೇಡರ ದಾಸಿಮಯ್ಯ
ಪ್ರಾಣನ ಕಳೆ ಪ್ರಕೃತಿಯಲ್ಲಿ ಅಡಗಿ ಪ್ರಕೃತಿಯ ಕಳೆ ಪ್ರಾಣನಲ್ಲಿ ಅಡಗಿ ಲಿಂಗವೆಂದರಿದು ಅಂಗೈಸಿ ಅನುಭವಿಸಬಲ್ಲವರ ಲೆಂಗಿ ನಾನಪ್ಪೆನೈ, ರಾಮನಾಥ.
--------------
ಜೇಡರ ದಾಸಿಮಯ್ಯ
ಬ ಪದದಿಂದ ಪ್ರಾರಂಭವಾಗುವ ವಚನಗಳು:
ಬಯಲ ಬಣ್ಣವ ಮಾಡಿ; ಸ್ವಯವ ನಿಲವ ಮಾಡಿ ಸುಳಿವಾತನ ಬೆಡಗ ಬಲ್ಲವರಾರೈ? ರಾಮನಾಥ!
--------------
ಜೇಡರ ದಾಸಿಮಯ್ಯ
ಬೆಕ್ಕು ನಾಯಿ ಶಿವಭಕ್ತರೊಕ್ಕು ಮಿಕ್ಕುದ ಕೊಂಡಡೆ ಸದಾಚಾರಿಯಾಗಬಲ್ಲುದೆ? ಭೃತ್ಯಾಚಾರಿಯಾಗಬಲ್ಲುದೆ? ಜಂಗಮಲಿಂಗದಲ್ಲಿ ನಂಬುಗೆಯಿಲ್ಲದೆ ಒಕ್ಕು ಕೊಂಡ ಪ್ರಸಾದ ಬೆಕ್ಕು ನಾಯಿ ತಿಂದಂತೆ ಕಾಣಾ! ರಾಮನಾಥ.
--------------
ಜೇಡರ ದಾಸಿಮಯ್ಯ
ಬಿಂದುವಿನೊಳಗೆ ನಾದ ಹೊಂದಿರ್ದ ಭೇದವನು ಲಿಂಗದೊಳಗೆ ಶರಣ ಸಂದಿರ್ದ ಭೇದವನು ಲೋಕದ ಸಂದೇಹಿಗಳೆತ್ತ ಬಲ್ಲರೈ! ರಾಮನಾಥ.
--------------
ಜೇಡರ ದಾಸಿಮಯ್ಯ
ಬಂದುದನರಿದು ಬಳಸುವಳು ಬಂದುದ ಪರಿಣಾಮಿಸುವಳು ಬಂಧು ಬಳಗವ ಮರಸುವಳು ದುಗ್ಗಳೆಯ ತಂದು ಬದುಕಿದೆನು ಕಾಣಾ!ರಾಮನಾಥ.
--------------
ಜೇಡರ ದಾಸಿಮಯ್ಯ
ಬರು ಸಠಗನ ಭಕ್ತಿ ದಿಟವೆಂದು ನಚ್ಚಲು ಬೇಡ. ಮಠದೊಳಗಣ ಬೆಕ್ಕು ಇಲಿಯ ಕಂಡು ಪುಟನೆಗೆದಂತಾಯಿತ್ತು ಕಾಣಾ! ರಾಮನಾಥ.
--------------
ಜೇಡರ ದಾಸಿಮಯ್ಯ
ಭ ಪದದಿಂದ ಪ್ರಾರಂಭವಾಗುವ ವಚನಗಳು:
ಭವಿಯ ಕಳೆದು ಭಕ್ತನಾದ ಬಳಿಕ ಭವಿ ನಂಟನೆಂದು ಹೊಗಿಸಲಾಗದು. ನಂಟುತನಕ್ಕೆ ಆತ್ಮನಿಚ್ಛೆಗೆ ಅಳುಪಿ ಭವಿಯೊಡನುಂಡಡೆ ಹಂದಿಯ ಬಾಯ ತುತ್ತ ನಾಯಿ ಸೆಳತಿಂದಂತೆ ಕಾಣಾ!ರಾಮನಾಥ.
--------------
ಜೇಡರ ದಾಸಿಮಯ್ಯ
ಭಕ್ತನ ಮಠವೆಂದು ಭಕ್ತಹೋದಡೆ ಆ ಭಕ್ತ ಭಕ್ತಂಗೆ ಅಡಿಯಿಟ್ಟು ಇದಿರೆದ್ದುನಡೆದು ಹೊಡೆಗೆಡೆದು ಒಡಗೊಂಡು ಬಂದು ವಿಭೂತಿ ಮೀಳ್ಯವನ್ನಿಕ್ಕಿ ಪಾದಾರ್ಚನೆಯಂ ಮಾಡಿಸಿ ಒಕ್ಕುದಕೊಂಡು ಓಲಾಡುತ್ತಿಪ್ಪುದೆ ಭಕ್ತಿ. ಹೀಂಗಲ್ಲದೆ ಬೆಬ್ಬನೆ ಬೆರತು, ಬಿಬ್ಬನೆ ಬೀಗಿ ಅಹಂಕಾರಭರಿತನಾಗಿಪ್ಪವನ ಮನೆಯ ಲಿಂಗಸನುಮತರು ಹೊಗರು ಕಾಣಾ! ರಾಮನಾಥ.
--------------
ಜೇಡರ ದಾಸಿಮಯ್ಯ
ಭಕ್ತಿಯ ಬಲ್ಲವರು ನಚ್ಚಿ ಮೆಚ್ಚಿ ಮನವನೊಚ್ಚತಗೊಡುವರು. ಭಕ್ತಿಯನರಿಯದ ಬಲುಪಾಪಿ ಜೀವಿಗಳು ಕಚ್ಚುವರು ಬಗುಳುವರು, ರಾಮನಾಥ.
--------------
ಜೇಡರ ದಾಸಿಮಯ್ಯ
ಭವಿಯ ಮನೆಯ ಅನ್ನಸವಿಯಾಯಿತ್ತೆಂಬ ಭಕ್ತಂಗೆ ಭವಿಪಾಕ ನರಕ. ಆಗಳಂತೆ ಭವಿಗೆ ಮಾಡಿದ ಹುಳುಗುಂಡ ಭಕ್ತಂಗಪ್ಪುದು ತಪ್ಪದು ಆ ಭವಿಗೆ ಭವಂ ನಾಸ್ತಿ ಕಾಣಾ! ರಾಮನಾಥ.
--------------
ಜೇಡರ ದಾಸಿಮಯ್ಯ
ಭಂಜಿಸಿಹೆನೆಂದೆಂಬೆ ಹಲಬರು ಭಂಜನೆಗೆ ಸಿಲುಕುವವು ಪ್ರಾಣಿಗಳಲ್ಲದೆ ಲಿಂಗವು ಭಂಜನೆಗೆ ಸಿಲುಕುವನೆ? ತಾತ್ಪರ್ಯಕ್ಕಲ್ಲದೆ. ಆ ಲಿಂಗದೆಂಬಲ ತಿಂದು ವೈಸಿಕವ ಮಾಡಿದಡೆ ಅದು ನಂಜಾಗಿ ಕಾಡುವದು ಕಾಣಾ! ರಾಮಾನಾಥ.
--------------
ಜೇಡರ ದಾಸಿಮಯ್ಯ
ಭಕ್ತಿಯ ಬಲ್ಲವರಿಗೆ ಸತ್ಯ ಸದಾಚಾರವ ಹೇಳಿದಡೆ ನಂಬುವರು, ನಚ್ಚುವರು, ಮಚ್ಚುವರು. ಭಕ್ತಿಯ ಹೊಲಬನರಿಯದ ವ್ಯರ್ಥರಿಗೆ ಸತ್ಯ ಸದಾಚಾರವ ಹೇಳಿದಡೆ ಕಚ್ಚುವರು, ಬಗುಳುವರು ಕಾಣಾ! ರಾಮನಾಥ.
--------------
ಜೇಡರ ದಾಸಿಮಯ್ಯ
ಮ ಪದದಿಂದ ಪ್ರಾರಂಭವಾಗುವ ವಚನಗಳು:
ಮಣಿವಡೆ ಶಿವಭಕ್ತ ಮಣಿಯ ಕಟ್ಟಲೆ ಬೇಕು. ಮಣಿಯದಿರ್ದಡೇನು? ಶಬುದಗುಂಡಿಗೆ! ಫಣಾಮಣಿದೇವರ ಮಣಿಮಕುಟದಲ್ಲದೆ, ಅದು ಮಣಿಯಲ್ಲದೇನು? ಹೇಳು ರಾಮನಾಥ.
--------------
ಜೇಡರ ದಾಸಿಮಯ್ಯ
ಮನೆಯಲ್ಲಿ ಅಟ್ಟೆನೆಂದಡೆ ಹೊಟ್ಟೆ ತುಂಬಿದುದುಂಟೆ? ಕೈಮುಟ್ಟಿ ಉಣ್ಣದನ್ನಕ್ಕರ! ತಾನು ವಚನಾಗಮದ ಪ್ರಸಂಗವ ಬಲ್ಲನೆಂದಡೆ ಬಲ್ಲವರಾರೂ ಇಲ್ಲವೆಂದಡೆ ಆತ ತನ್ನ ನುಡಿಗೆ ಸಿಲುಕುವನೆ? ಇಲ್ಲ ಕಾಣಾ! ರಾಮನಾಥ.
--------------
ಜೇಡರ ದಾಸಿಮಯ್ಯ
ಮಾಡಿದಲ್ಲದೆ ಮನೆಯೊಳಗಾಗದು ಬಯಲು ಕಣ್ಣು ಕಂಡಲ್ಲದೆ ಪರವಾಗದು ಮನ ಪರವೆಂದಲ್ಲದೆ ಪರವಾಗದು ಈ ಪರಿಯ ನರರೆತ್ತ ಬಲ್ಲರೈ? ರಾಮನಾಥ.
--------------
ಜೇಡರ ದಾಸಿಮಯ್ಯ
ಮಾಡಿದ ಕರ್ಮವನೂಡಯ್ಯ ಎನ್ನ ಮನದಣಿವನ್ನಕ್ಕ. ಬೇಡೆನ್ನೆನು, ಮಾರ್ಕೊಳ್ಳೆನು. ಎಲೆ ರೂಢಿಗೀಶ್ವರನ ಕೂಡುವೆನು ನೀರಡಸಿದಂತೆ,ರಾಮನಾಥ.
--------------
ಜೇಡರ ದಾಸಿಮಯ್ಯ
ಮಹಾಘನವಪ್ಪ ಬೋನವನು ಒಂದನುವಿನ ಪರಿಯಾಣದಲ್ಲಿ ಹಿಡಿದು ಗುರುಲಿಂಗವು ಒಳಗಾದ ಲಿಂಗವಾರೋಗಣೆಯ ಮಾಡಿ ಮಿಕ್ಕುದು ಪ್ರಸಾದವೆ? ಅಲ್ಲಲ್ಲ. ಮಹಾಘನವಪ್ಪ ಲಿಂಗವ ಒಂದನುವಿನಲ್ಲಿ ತಂದಿರಿಸಿದ ಆತನ ಮನವೆ ಪ್ರಸಾದ ಕಾಣಾ! ರಾಮನಾಥ.
--------------
ಜೇಡರ ದಾಸಿಮಯ್ಯ
ಮರನೊಳಗಣ ಮಂದಾಗ್ನಿಯ ಉರಿಯದಂತಿರಿಸಿದೆ ನೊರೆವಾಲೊಳಗೆ ತುಪ್ಪವ ಕಂಪಿಲ್ಲದಂತಿರಿಸಿದೆ ಶರೀರದೊಳಗಾತ್ಮನನಾರು ಕಾಣದಂತಿರಿಸಿದೆ ನೀ ಬೆರಸುವ ಭೇದಕ್ಕೆ ಬೆರಗಾದೆನಯ್ಯ!ರಾಮನಾಥ.
--------------
ಜೇಡರ ದಾಸಿಮಯ್ಯ
ಮುಂಡೆಗೆ ಮುಡಿಕಟ್ಟೇಕೊ? ಗುಂಡಂಗೇಕೊ ಗುರುಪದ ಭಕ್ತಿ? ಚಂಡಿಕೆಯ ತಲೆಯ ಚಾಂಡಾಲಂಗೆ ಅಖಂಡಿತ ಲಿಂಗದ ಅನುವೇಕೆ? ಹೇಳ! ರಾಮನಾಥ.
--------------
ಜೇಡರ ದಾಸಿಮಯ್ಯ
ಮೊಲೆ ಮುಡಿ ಬಂದಡೆ ಹೆಣ್ಣೆಂಬರು. ಗಡ್ಡ ಮೀಸೆ ಬಂದಡೆ ಗಂಡೆಂಬರು. ನಡುವೆ ಸುಳಿವ ಆತ್ಮನು ಹೆಣ್ಣೂ ಅಲ್ಲ ಗಂಡು ಅಲ್ಲ ಕಾಣಾ! ರಾಮನಾಥ.
--------------
ಜೇಡರ ದಾಸಿಮಯ್ಯ
ಮೆಳೆಯ ಮೇಲಣ ಕಲ್ಲು ಜಗದೆರೆಯನಾಗಬಲ್ಲುದೆ? ಮೆಳೆ ಶಿವಭಕ್ತನಾಗಬಲ್ಲುದೆ? ನಿಮ್ಮ ತನುಮನಧನವನರಿಯದಿದ್ದಡೆ ಸದುಭಕ್ತರಹರೆ? ರಾಮನಾಥ.
--------------
ಜೇಡರ ದಾಸಿಮಯ್ಯ
ಮನಮುಟ್ಟಿ ನೆನವಲ್ಲಿ ತನು ನಿಮ್ಮದಾಯಿತ್ತು. ತನುಮುಟ್ಟಿ ಅಪ್ಪಿ, ಮನಮುಟ್ಟಿ ನೆರದು ವನಿತೆಯರ ಕೂಟಕ್ಕೆ ತೆರಪಿಲ್ಲವಾಯಿತ್ತು. ಜನನ ಮರಣದ ಬಾಧೆ ಹರಿಯಿತ್ತು. ಈಶ್ವರ! ನಿಮ್ಮ ಪಾದಸೇವೆಯಿಂದ ಕಾಣಾ!ರಾಮನಾಥ.
--------------
ಜೇಡರ ದಾಸಿಮಯ್ಯ
ಮಣಿಗಣ ಸೂತ್ರದಂತೆ ತ್ರಿಣೆಯ ನೀನಿಪ್ಪೆಯಯ್ಯ. ಎಣಿಸುವಡೆ ತನ್ನ ಭಿನ್ನ ಆತ್ಮನೊಬ್ಬನೆ. ಅಣುರೇಣು ಮಧ್ಯದಲ್ಲಿ ಗುಣಭರಿತ ನೀನೆಂದು ಮಣಿಯುತಿರ್ಪೆನಯ್ಯಾ, ರಾಮನಾಥ.
--------------
ಜೇಡರ ದಾಸಿಮಯ್ಯ
ಮಾರಿಯ ಪೂಜಿಸಿ, ಮಸಣಕ್ಕೆ ಹೋಗಿ ಗೋರಿಗೊಳಿಸಿ ಕುರಿಯ ಕೊರಳನೆ ಕೊಯ್ದುಂಬ ಕ್ರೂರಕರ್ಮಿಗಳನವರ ಶಿವಭಕ್ತರೆನಬಹುದೆ? ಆರೈಯದೆ ಅವನ ಮನೆಯಲುಂಡ ಭಕ್ತ ಅಘೋರನರಕಕ್ಕಿಳಿವ ಕಾಣಾ! ರಾಮನಾಥ.
--------------
ಜೇಡರ ದಾಸಿಮಯ್ಯ
ಮಂಡೆಯ ಬೋಳಿಸಿಕೊಂಡು ಮಡಿದು ಗೋಸಿಯ ಕಟ್ಟಿದಡೇನು? ಕಂಡಕಂಡವರಿಗೆ ಕಯ್ಯೊಡ್ಡಿ ಬೇಡುವ ಭಂಡರನೊಲ್ಲನೆಮ್ಮ ರಾಮನಾಥ.
--------------
ಜೇಡರ ದಾಸಿಮಯ್ಯ
ಮಡದಿಯ ಪ್ರಾಣಕ್ಕೆ ಮೊಲೆ ಮುಡಿ ಇದ್ದಿತ್ತೆ? ಒಡೆಯನ ಪ್ರಾಣಕ್ಕೆ ಇದ್ದಿತ್ತೆ ಯಜ್ಞೋಪವೀತ? ಕಡೆಯಲ್ಲಿದ್ದ ಅಂತ್ಯಜನು ಹಿಡಿದಿದ್ದನೆ ಹಿಡಿಗೋಲ? ನೀ ತೊಡಕಿಕ್ಕಿದ ತೊಡಕನೀ ಲೋಕದ ಜಡರೆತ್ತ ಬಲ್ಲರೈ ರಾಮನಾಥ.
--------------
ಜೇಡರ ದಾಸಿಮಯ್ಯ
ವ ಪದದಿಂದ ಪ್ರಾರಂಭವಾಗುವ ವಚನಗಳು:
ವೇಷವ ಹಲ್ಲಣಿಸುವ ಹಿರಿಯಣ್ಣಂಗೇನು? ವೇಷವ ಹೊತ್ತು ದೋಷದಲ್ಲಿ ನಡೆವ ರಾಶಿಮಾ (ನವ) ವೇಷಗಳ್ಳರ ಕಂಡು ವೇಶಿಯೆಂದ, ರಾಮನಾಥ.
--------------
ಜೇಡರ ದಾಸಿಮಯ್ಯ
ವೇಷದ ಕೂಡೆ ವಾಸಿಗೆ ಹೋರುವವನು ಈಶ್ವರದ್ರೋಹಿ. ವೇಷವ ಈಶ್ವರನೆಂದು ತಿಳಿಯದವ ಪಾಶಕ್ಕೆ ಸಿಕ್ಕದ ಪಶುವಿನಂತೆ ಕಾಣ, ರಾಮನಾಥ.
--------------
ಜೇಡರ ದಾಸಿಮಯ್ಯ
ವೇಷವ ಹೊತ್ತು ದೋಷದಲ್ಲಿ ನಡೆದಡೆ ದೋಷಕ್ಕೆ ವೇಷ ಭಂಡ. ಮೊದಲೆ ವೇಷವ ಕಂಡು ಲೇಸೆಂದು ಕೊಂಡಾಡುವ ದೋಷಿಗಳ ನರಕದಲ್ಲಿಕ್ಕುವ ಕಾಣಾ! ರಾಮನಾಥ.
--------------
ಜೇಡರ ದಾಸಿಮಯ್ಯ
ವೇಷದ ಹೊತ್ತ ಹಿರಿಯರು ಈಶ್ವರಧ್ಯಾನದಲ್ಲಿರಬೇಕು. ವೇಷವ ತೋರಿ ಗ್ರಾಸಕ್ಕಾಗಿ ಆಸೆಮಾಡಿ ಲೋಗರ ಮನೆಯ ಕಾದು ಗ್ರಾಸವ ಪಡೆದು ಉದರವ ಹೊರೆವ ವೇಷವು ವೇಶಿಯಿಂದವು ಕರಕಷ್ಟ! ರಾಮನಾಥ.
--------------
ಜೇಡರ ದಾಸಿಮಯ್ಯ
ವಿಷಯದ ಪಿತ್ತ ತಲೆಗೇರಿದಲ್ಲಿ ವಿವೇಕವೆಂಬ ದೃಷ್ಟಿ ನಷ್ಟವಾಗಿ ಪಶುಪತಿಯ ನೆನಹುಗೆಟ್ಟು ಮತಿಮಂದನಾದಲ್ಲಿ ಮಂತ್ರ ನೆನಹುಂಟೆ! ಹೇಳ! ರಾಮನಾಥ.
--------------
ಜೇಡರ ದಾಸಿಮಯ್ಯ
ವೇಷಕ್ಕೆ ಅಂಜುವೆ ದೋಷಕ್ಕೆ ಹೇಸುವೆ! ಈಶ್ವರನಾಗಿ ಎನ್ನ ಕೈಯಲ್ಲಿ ತನ್ನ ಆರಾಧಿಸಿಕೊಳಲೊಲ್ಲದೆ ಹದಿನೆಂಟು ಜಾತಿಯ ಹೇಸಿಕೆಯ ಕೂಳ ತಿಂಬವರನೇನೆಂಬೆನೈ,ರಾಮನಾಥ.
--------------
ಜೇಡರ ದಾಸಿಮಯ್ಯ
ವೇಷವನೂ ವೇಶಿಯನೂ ಸರಿಯೆಂಬೆ. ವೇಷವು ಲೋಕವ ಹಾರುವದು. ವೇಶಿಯೂ ಲೋಕವ ಹಾರುವಳು. ವೇಷವ ಹೊತ್ತು ಲೋಕವ ಹಾರದಿರ್ದಡೆ ಆತನ ಈಶ್ವರನೆಂಬೆ ಕಾಣಾ! ರಾಮನಾಥ.
--------------
ಜೇಡರ ದಾಸಿಮಯ್ಯ
ವೇಶಿಯ ಎಂಜಲ ತಿಂದು ಈಶ್ವರಪ್ರಸಾದವ ಭುಂಜಿಸಿದಡೆ ಓಸರಿಸಿತ್ತಯ್ಯ ಲಿಂಗವು ಆ ದ್ರೋಹಿಗೆ! ಭಾಷೆ ತಪ್ಪುವನು! ಭವದಲ್ಲಿ ಬಳಲುವನೆಂದವನ ಕಂಡು ಹೇಸಿ ಕಡೆಗೆ ತೊಲಗಿದೆನು ಕಾಣಾ! ರಾಮನಾಥ.
--------------
ಜೇಡರ ದಾಸಿಮಯ್ಯ
ಶ ಪದದಿಂದ ಪ್ರಾರಂಭವಾಗುವ ವಚನಗಳು:
ಶಿವಭಕ್ತರು ತಮ್ಮ ನಿಜ ಕೈಲಾಸಕ್ಕೆ ಹೋದಡೆ ಅವರರಸಿಯ ಪಾರ್ವತಿಯ ಸತಿಯೆಂದು ಕಾಣಬೇಕು. ಅಲ್ಲಿ ಅನುಸರಣೆಯ ಕೊಟ್ಟು ಬೆರಸಿ ಮಾತನಾಡುವ ನರಕಿಗಳನೇನೆಂಬೆ, ರಾಮನಾಥ.
--------------
ಜೇಡರ ದಾಸಿಮಯ್ಯ
ಶ್ರೀ ಗುರು ಲಿಂಗ ಜಂಗಮಕ್ಕೆ ಅರ್ಥ ಪ್ರಾಣಾಭಿಮಾನವ ಕೊಟ್ಟು ಅಹಂಕಾರವಳಿದಿಜಹಂತು ಪುರಾತನರ ಮನೆಯಲ್ಲಿ ಎತ್ತಾಗಿ ಹುಟ್ಟಿಸಯ್ಯಾ. ತೊತ್ತಾಗಿ ಹುಟ್ಟಿಸಯ್ಯಾ, ಬಾಗಿಲ ಕಾಯ್ದಿಪ್ಪಂತೆ ಸೊಣಗನಾಗಿ ಹುಟ್ಟಿಸಯ್ಯಾ, ಜಂಗಮಲಿಂಗವೇ ಶಿವನೆಂದು ನಂಬಿ ನಮಸ್ಕರಿಸುವ ಪುರಾತನರ ಮನೆಯ ಬೇಲಿಯಾಗಿ ಹುಟ್ಟಿಸಯ್ಯಾ.ರಾಮನಾಥ.
--------------
ಜೇಡರ ದಾಸಿಮಯ್ಯ
ಶಿವಭಕ್ತನು ಹೋಗಿ ತನ್ನೊಡಲಿಚ್ಛೆಗೆ ಭವಿಯ ಮನೆಯಲುಂಡನಾದಡೆ ಮಡೆಕೆಯ ಕೂಳ ತಿಂದ ತುಡುಗಣಿ ನಾಯಂತೆ ಆ ಭಕ್ತ. ಮೃಢ! ನೀನಿಲ್ಲದ ಮನೆಯ ಕೂಳು ಹೊಲೆಯರ ಮನೆಯ ಅಡಗಿನಿಂದ ಕರಕಷ್ಟ ಕಾಣಾ, ರಾಮನಾಥ.
--------------
ಜೇಡರ ದಾಸಿಮಯ್ಯ
ಶರಧಿಯ ಮೇಲೆ ಧರೆಯ ಕರಗದಂತಿರಿಸಿದೆ! ಅಂಬರಕ್ಕೆ ಗಡಿಗೆ ಬೋದಿಗೆಯಿಲ್ಲದಂತಿರಿಸಿದೆ! ಎಲೆ ಮೃಡನೆ! ನೀನಲ್ಲದೆ ಉಳಿದ ದೈವಂಗಳಿಗಹುದೆ?ರಾಮನಾಥ.
--------------
ಜೇಡರ ದಾಸಿಮಯ್ಯ
ಶಿವಪೂಜೆಯೆತ್ತ, ವಿಷಯದ ಸವಿಯೆತ್ತ; ಆ ವಿಷಯದ ಸವಿ ತಲೆಗೇರಿ ಶಿವಪೂಜೆಯ ಬಿಟ್ಟು ವೇಶಿಯರ ಎಂಜಲ ಹೇಸದೆ ತಿಂಬ ದೋಷಿಗಳನೇನೆಂಬೆನೈ, ರಾಮನಾಥ.
--------------
ಜೇಡರ ದಾಸಿಮಯ್ಯ
ಸ ಪದದಿಂದ ಪ್ರಾರಂಭವಾಗುವ ವಚನಗಳು:
ಸಾಗರದೊಳಗಣ ಕಿಚ್ಚಿನ ಸಾಕಾರದಂತೆ, ಸಸಿಯೊಳಗಣ ಫಲಪುಷ್ಪ ರುಚಿಯ ಪರಿಮಳದಂತೆ, ಮನವ ಮರೆಯ ಮಾತು ನೆನಹಿನಲ್ಲಿ ಅರಿದು, ನಾಲಗೆಯ ನುಡಿವಾಗಲಲ್ಲದೆ ಕಾಣಬಾರದು, ಕೇಳಬಾರದು ಒಂದಂಗದೊಳಗಡಗಿದ ನೂರೊಂದರ ಪರಿ,ರಾಮನಾಥ.
--------------
ಜೇಡರ ದಾಸಿಮಯ್ಯ
ಸತಿಪತಿಗಳೊಂದಾದ ಭಕ್ತಿ ಹಿತವಾಗಿಪ್ಪುದು ಶಿವಂಗೆ. ಸತಿಪತಿಗಳೊಂದಾಗದವನ ಭಕ್ತಿ ಅಮೃತದೊಳು ವಿಷ ಬೆರೆದಂತೆ ಕಾಣಾ! ರಾಮನಾಥ.
--------------
ಜೇಡರ ದಾಸಿಮಯ್ಯ
ಸಾಸಿವೆಯಷ್ಟು ಭಕ್ತಿಯಳ್ಳನ್ನಕ್ಕ ವೇಶಿಯ ಮುಟ್ಟಿದಡೆ ಹೊಲೆಯರ ಮನೆಯ ಮುರುಹ ಹೊರಗಿರಿಸಿದಡೆ ಹಂದಿ ಬಂದು ಮೂಸಿ ಮೇದಂತೆ ಕಾಣಾ! ರಾಮನಾಥ.
--------------
ಜೇಡರ ದಾಸಿಮಯ್ಯ
ಸೊಡರು ಕೆಟ್ಟಡೆ ದೃಷ್ಟಿಯಡಗಿಪ್ಪ ಭೇದವನು ಒಡಲು ಕೆಟ್ಟಡೆ ಜೀವವಾವೆಡೆಯಲಡಗೂದು? ಈ ಮರೆಯೆಡೆಯಣ ಭೇದವ ಭೇದಿಸಬಲ್ಲಡೆ ಪೊಡವಿಗೆ ಗುರುವಪ್ಪನೆಂದು ಮುಡಿಗೆಯನಿಕ್ಕಿದೆ ಪರಸಮಯಕ್ಕೆಂದು, ರಾಮನಾಥ.
--------------
ಜೇಡರ ದಾಸಿಮಯ್ಯ
ಸತಿಯರ ಸಂಗವನು ಅತಿಶಯ ಗ್ರಾಸವನು ಪೃಥ್ವಿಗೀಶ್ವರನ ಪೂಜೆಯನು ಅರಿವುಳ್ಳಡೆ ಹೆರರ ಕೈಯಿಂದ ಮಾಡಿಸುವರೆ!
--------------
ಜೇಡರ ದಾಸಿಮಯ್ಯ
ಸರ್ಪನೂ ಕೂರ್ಮನೂ ದಿಕ್ಕರಿಗೆಳೆಂಟೂ ಭೂಮಿಯ ಹೊತ್ತಿರ್ದಪರೆಂದು ಅನಿಶಾ ಹೊತ್ತಿಪ್ಪವರಿಗೆ ಅತ್ತಲಾಧಾರ ಇತ್ತಲಾಧಾರ. ಉತ್ತರಗುಡುವವರಿಗೆ ಇಕ್ಕುವೆ ಮುಂಡಿಗೆಯ. ಎತ್ತುವರುಳ್ಳಡೆ ತೋರಿರೈ, ರಾಮನಾಥ.
--------------
ಜೇಡರ ದಾಸಿಮಯ್ಯ
ಸತ್ಯದ ನುಡಿ ತೀರ್ಥ, ಭಕ್ತಿಯ ನಡೆ ತೀರ್ಥ, ಮುಕ್ತಿಯ ಪ್ರಸಂಗ ಉಳ್ಳಡೆ ತೀರ್ಥ, ಹರಿವ ನದಿ ಎತ್ತಣಾ ತೀರ್ಥ! ರಾಮನಾಥ.
--------------
ಜೇಡರ ದಾಸಿಮಯ್ಯ
ಸಣ್ಣ ನನೆಯೊಳಗಣ ಪರಿಮಳವ ಹೊರಸೂಸಿ ಇದಿರಿಂಗೆ ಅರುಹಿಸಬಲ್ಲುದೆ ವಾಯು? ಕೊಡಗೂಸಿನೊಳಗಣ ಮೊಲೆ ಮುಡಿಯ ಹಡೆದ ತಾಯಿ-ತಂದೆಗಳೆಂದಡೆ ಕಾಣಿಸಿಕೊಡಬಲ್ಲರೆ ಕಾಬವರ ಕಣ್ಣಿಗೆ? ಪಕ್ವಕ್ಕಲ್ಲದೆ ಪರಿಣಾಮ ಕಾಣಿಸದು ಕಾಣಾ!ರಾಮನಾಥ.
--------------
ಜೇಡರ ದಾಸಿಮಯ್ಯ
ಸ್ವಸ್ತಿಕಾಸನದಲ್ಲಿದ್ದು ಅತ್ತಿತ್ತ ಚಲಿಸದೆ ನೆಟ್ಟೆಲುವ ನೆಟ್ಟನೆ ಮಾಡಿ, ಅಧೋವಾಯುವನೂಧ್ರ್ವಮುಖಕ್ಕೆ ತಂದು, ಕಂಠ ಸಂಕೋಚದಿಂದ ಊಧ್ರ್ವವಾಯುವ ನಿಲ್ಲೆಂದು ನಿಲಿಸಿ, ಮನವ ತೊಡರಿಸಿ, ಉನ್ಮನಿಯ ಸ್ಥಾನದಲ್ಲಿ ಬಂಧವನವಂ ಮಾಡಿ, ಅಂತರ್ಬಾಹ್ಯ ವ್ಯಾಪಾರವಳಿದು ನಿಂದುದೆ ಯೋಗ,ರಾಮನಾಥ.
--------------
ಜೇಡರ ದಾಸಿಮಯ್ಯ
ಸರ್ವಜ್ಞಾನಿಗಳಾಗಿ ಅಚ್ಚುಗ ಬಡುವಡೆ, ಹಬ್ಬಿದ ಪಾಪದ ಫಲ ಉಂಬಡೆ, ಒಬ್ಬಳ್ಳವನೆ ಬಿತ್ತಿ ಆ ಒಬ್ಬಳ್ಳವನೆ ಬೆಳೆವಡೆ, ಕಬ್ಬುನ ಹುಳಿವಡೆ ಇನ್ನೇವೆ, ರಾಮನಾಥ.
--------------
ಜೇಡರ ದಾಸಿಮಯ್ಯ
ಹ ಪದದಿಂದ ಪ್ರಾರಂಭವಾಗುವ ವಚನಗಳು:
ಹಸಿವಿನಲ್ಲಿ ವಿಷಯದಲ್ಲಿ ಭವಿಯ ಬೆರಸಿದೆನಾದಡೆ ಅವ ವಿಷಮಾಕ್ಷ! ನಿಮಗೆ ದೂರ. ದಶ ಶತಕೋಟಿ ವರುಷ ನರಕದೊಳಗಿಹ ಕಾಣಾ!ರಾಮನಾಥ.
--------------
ಜೇಡರ ದಾಸಿಮಯ್ಯ
ಹೆಂಬೇಡಿಗೆ ಹಿಡಿಯಬಹುದೆ ಹೇಳಿಗೆಯೊಳಗಣ ಹಾವ? ತೊರೆಯಬಹುದೆ ಹೊನ್ನು ಹೆಣ್ಣು ಮಣ್ಣ ನಿನ್ನನರಿಯದ ನರಗುರಿಗಳಿಗೆ! ರಾಮನಾಥ.
--------------
ಜೇಡರ ದಾಸಿಮಯ್ಯ
ಹರಿದ ಗೋಣಿಯಲ್ಲೊಬ್ಬ ಕಳವೆಯ ತುಂಬಿದ. ಇರುಳೆಲ್ಲಾ ನಡೆದನಾ ಸುಂಕಕಂಜಿ. ಕಳವೆಯೆಲ್ಲಾ ಹೋಗಿ ಬರಿಗೋಣಿ ಉಳಿಯಿತ್ತು! ಅಳಿಮನದವನ ಭಕ್ತಿ ಇಂತಾಯಿತ್ತು! ರಾಮನಾಥ.
--------------
ಜೇಡರ ದಾಸಿಮಯ್ಯ
ಹೊಲಬನರಿಯದ ಗುರು ಸುಲಭನಲ್ಲದ ಶಿಷ್ಯ ಕೆಲಬಲನ ನೋಡದುಪದೇಶ ಅಂಧಕನ ಲಾಭ ಹೊಕ್ಕಂತೆ ಕಾಣಾ! ರಾಮನಾಥ.
--------------
ಜೇಡರ ದಾಸಿಮಯ್ಯ
ಹೇಳಿತ್ತ ಕೇಳುವನ ಕೀಳಿನೊಳಗಿರೆ ಲೇಸು! ಹೇಳಿತ್ತ ಕೇಳದ ಕಡುಮೂರ್ಖನ ಕೋಣೆಯಲ್ಲಿರಲಾಗದು! ರಾಮನಾಥ.
--------------
ಜೇಡರ ದಾಸಿಮಯ್ಯ
ಹೆಣ್ಣ ಕಂಡು ಹೆಚ್ಚಿ ಹೆಕ್ಕಳಬಡುವಂತೆ ಕಣ್ಣಿಟ್ಟು ನೋಡಿರೋ ಶಿವಲಿಂಗದೇವನ ಕರಣದಿಚ್ಛೆಗೆ ಹರಿದು, ನರಕದಲ್ಲಿ ನೆರದು ಬರುದೊರೆ ಹೋಗದೆ ಮರೆಯದೆ ಪೂಜಿಸಿ, ನಮ್ಮ ರಾಮನಾಥನ.
--------------
ಜೇಡರ ದಾಸಿಮಯ್ಯ
ಹರ ತನ್ನ ಭಕ್ತರ ತಿರಿವಂತೆ ಮಾಡುವ ಒರದು ನೋಡುವ ಮಿಸುನಿಯ ಚಿನ್ನದಂತೆ. ಅರದು ನೋಡುವ ಚಂದನದಂತೆ. ಅರಿದು ನೋಡುವ ಕಬ್ಬಿನ ಕೋಲಿನಂತೆ. ಬೆದರದೆ ಬೆಚ್ಚದೆ ಇರ್ದಡೆ ಕರವಿಡಿದೆತ್ತಿಕೊಂಬ, ನಮ್ಮ ರಾಮನಾಥನು.
--------------
ಜೇಡರ ದಾಸಿಮಯ್ಯ
ಹಸಿವಿಲ್ಲದ ಬೊಂಬೆಗೆ ತೃಷೆಯಿಲ್ಲದ ನೀರೆರೆದು ಮಸಕವಿಲ್ಲದ ಮಾತ ಮನದಲ್ಲಿ ಹೇಳಿ ಹೆಸರಿಲ್ಲದೆ ಕರೆದಡೆ ಓ! ಎಂದವ ನೀನೊ ನಾನೋ!ರಾಮನಾಥ.
--------------
ಜೇಡರ ದಾಸಿಮಯ್ಯ
ಹೊಲೆಯರ ಬಾವಿಯಲೊಂದು ಎಲುನಟ್ಟಿದ್ದಡೆ ಹೊಲೆಯೆಂಬುದು ಲೋಕವೆಲ್ಲ. ಹಲವೆಲುವಿದ್ಧಬಾಯಿ ಒಲವರವ ನುಡಿದಡೆ ಹೊಲೆಯರ ಬಾವಿಯಿಂದ ಕರಕಷ್ಟ ಕಾಣಾ! ರಾಮನಾಥ.
--------------
ಜೇಡರ ದಾಸಿಮಯ್ಯ
ಹಿರಿದಪ್ಪ (ಆ) ಹಾರವ ಕೊಂಡು ಸ್ವರವು ಬಿಂದುವಿನಿಚ್ಛೆಯಲ್ಲಿ ಹರಿದಾಡುವವರು ಯೋಗಿಗಳೆ? ಅಲ್ಲಲ್ಲ ನಿಲ್ಲು! ಸ್ವರವು ಸುಸ್ವರವಾಗಿ ಬಿಂದು ತರಹರವಾಗಿರಬಲ್ಲಾತನೆ ಯೋಗಿ ಕಾಣಾ!ರಾಮನಾಥ.
--------------
ಜೇಡರ ದಾಸಿಮಯ್ಯ
ಹೇಳಬಲ್ಲಡೆ ಬೋಳು ಕೇಳಬಲ್ಲಡೆ ಬೋಳು ಹೇಳಲು ಕೇಳಲು ಅರಿಯದಿದ್ದಡೆ ಇವೆಲ್ಲ ಜಾಳು ಬೋಳು ಕಾಣಾ! ರಾಮನಾಥ.
--------------
ಜೇಡರ ದಾಸಿಮಯ್ಯ
ಹಂದಿ ಶ್ರೀಗಂಧವನೆಂದೂ ಒಲ್ಲದು. ಕುಂದದೆ ಹರಿವುದು ಅಮೇಧ್ಯಕ್ಕೆ. ಶಿವಭಕ್ತನಾಗಿರ್ದು ಹಿಂದ ಬೆರಸಿದಡೆ ಆ ಹಂದಿಗಿಂದವು ಕರಕಷ್ಟ ಕಾಣಾ! ರಾಮನಾಥ.
--------------
ಜೇಡರ ದಾಸಿಮಯ್ಯ
ಹಂದಿ ಶ್ರೀಗಂಧವ ಹೂಸಿದಡೇನು? ಗಂಧರಾಜನಾಗಬಲ್ಲುದೆ? ನವಿಲು ನಲಿಯಿತ್ತೆಂದಡೆ ಕಾಕೋಳಿ ಪುಕ್ಕವ ತರಕೊಂಡಂತೆ ಕರ್ಮಿಗಳ ಭಕ್ತಿ! ಹೊರವೇಷದ ವಿಭೂತಿ ರುದ್ರಾಕ್ಷಿಯ ಹೂಸಿದಡೆನು ತೆರನನರಿದು ಮರವೆಯ ಕಳದು ಮಾತಿನಂತೆ ನೀತಿಯುಳ್ಳಡೆ ಅವರ ಅಜಾತರೆಂಬೆ ಕಾಣಾ! ರಾಮನಾಥ.
--------------
ಜೇಡರ ದಾಸಿಮಯ್ಯ
ಹಸ್ತಾಬ್ಜ ಮಥನದಿಂದೊತ್ತಿ ಭಸ್ಮವ ಮಾಡಿ ಮತ್ತೆ ಪಂಚಾಕ್ಷರಿಯ ಜಪಾವಳಿಯ ಚಿತ್ತ ಶ್ರೊತ್ರದೊಳು ಮತ್ತೆ ಧಾರೆಯನೆರೆಯೆ ಸತ್ಯವದು ನಿನ್ನಂತೆ, ರಾಮನಾಥ.
--------------
ಜೇಡರ ದಾಸಿಮಯ್ಯ
ಹಸಿವೆಂಬ ಹೆಬ್ಬಾವು ಬಸುರ ಬಂದು ಹಿಡಿದಡೆ ವಿಷವೇರಿತ್ತಯ್ಯಾ ಆಪಾದಮಸ್ತಕಕ್ಕೆ. ಹಸಿವಿಗನ್ನವನಿಕ್ಕಿ ವಿಷವನಿಳುಹಬಲ್ಲಡೆ ವಸುಧೆಯೊಳಗೆ ಆತನೆ ಗಾರುಡಿಗ ಕಾಣಾ! ರಾಮನಾಥ.
--------------
ಜೇಡರ ದಾಸಿಮಯ್ಯ
ಹಾಸೇಕೆ ಹೊರಸೇಕೆ? ಲೇಸೇಕೆ ಹೊಲ್ಲೆಹವೇಕೆ? ನಿಮ್ಮ ಸಾತ್ವಿಕರಿದಿರಲ್ಲಿ ನಾನೇಕೆ? ಸರಿಹೊರಸು ನಿಮ್ಮ ಸರಿಪಂತಿಯೆಂಬ ಹೇಸಿಕೆಯುಂಟೆ?ರಾಮನಾಥ.
--------------
ಜೇಡರ ದಾಸಿಮಯ್ಯ
ಹೂವಿನೊಳಗಣ ಕಂಪ ಹೊರಸೊಸಿ ಸುಳಿವ ಅನಿಲನಂತೆ ಅಮೃತದೊಳಗಣ ರುಚಿಯ ನಾಲಿಗೆಯ ತುದಿಯಲ್ಲಿ ಅರಿವನ ಚೇತನದಂತೆ ನಿಲ್ಲವಿಲ್ಲದ ರೂಪ ಕಳೆಯಲ್ಲಿ ವೇದಿಸುವವನ ಪರಿ!ರಾಮನಾಥ.
--------------
ಜೇಡರ ದಾಸಿಮಯ್ಯ
|
|
|
|
|
|
|
|